ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮಗಳಲ್ಲಿ ಕಾಯಕ ಹಾಗೂ ದಾಸೋಹ ತತ್ವಕ್ಕೆ ಧಕ್ಕೆಯಾಗದೆ ಬಹು ಜನರಿಗೆ ಒಳ್ಳೆಯ ಭವಿಷ್ಯ ಸೃಷ್ಟಿಯಾಗುತ್ತಾ ಸಾಗುವುದು. ಗುರು ವಿರಕ್ತ ಮಠಗಳು ನಂದಿ ಕೃಷಿಕರಿಂದ ಬೆಳೆಯುತ್ತಾ ಬಂದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ ಎಂಬುದು ಮೇಲಿನ ಉದಾಹರಣೆ ಹಾಗೂ ಇತಿಹಾಸದಿಂದ ಸ್ಪಷ್ಟವಾಗಿ ತಿಳಿಯುತ್ತದೆ. ನಂದಿ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿ ಗುರು ವಿರಕ್ತ ಮಠಗಳಲ್ಲಿ ಸ್ಥಾಪಿಸಿರುವ ನಂದಿ ಮೂರ್ತಿಗಳು ನಾಗರಿಕತೆ ವಿಕಾಸವಾದ ಇತಿಹಾಸವನ್ನು ಕೂಗಿ ಹೇಳುತ್ತಿವೆ. ಐದು ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ದೊಡ್ಡದಾದ ಪ್ರಕೃತಿ ವಿಕೋಪ ಘಟಿಸಿದಾಗ ಅಳಿದುಳಿದ ಜನರಿಂದ ಪುನಃ ನಾಗರಿಕತೆ ನಂದಿ ಕೃಷಿ ಸಂಸ್ಕೃತಿಯಿಂದ ವಿಕಾಸವಾಗುತ್ತಾ ಬಂದಿತು. 4 ರಿಂದ 12 ನೇ ಶತಮಾನದಲ್ಲಿ ನಾಗರಿಕತೆಯ ಬೆಳವಣಿಗೆ ಉತ್ತುಂಗ ಸ್ಥಿತಿಗೆ ತಲುಪಿತು. ಅದೇ ಕಾರಣಕ್ಕೆ ಆಗಮ ಶಾಸ್ತ್ರ ಆಧಾರಿತವಾಗಿ ಅನೇಕ ಶಿವಾಲಯಗಳನ್ನು ನಿರ್ಮಿಸಲಾಯಿತು. ನಾಗರಿಕತೆ ಎಲ್ಲಿಂದ ಎಲ್ಲಿಯವರೆಗೆ ಬೆಳೆಯುತ್ತಾ ಬಂದಿದೆ ಎಂಬುದನ್ನು ದೇವಾಲಯಗಳು ಹಾಗೂ ಕಲೆಯ ಮೂಲಕ ತಿಳಿಸುವ ವಿದ್ಯೆಯೇ ಆಗಮ ಶಾಸ್ತ್ರವಾಗಿದೆ.
12ನೇ ಶತಮಾನದ ವರೆಗೆ ನಾಗರಿಕತೆ ಬೆಳೆಯುತ್ತಾ ಬಂದಂತೆ ಭಾರತದಲ್ಲಿ ಅನೇಕ ಶಿವಾಲಯಗಳು ನಿರ್ಮಾಣವಾಗಿ ಸುಸಂಸ್ಕೃತ ಸಮಾಜ ನಿರ್ಮಾಣವಾಯಿತು. ಈ ಸತ್ಯವನ್ನು ಅರಿತ ಬಸವಣ್ಣನವರು ಇಷ್ಟಲಿಂಗವನ್ನು ಬಹು ಜನರಿಗೆ ಪರಿಚಯಿಸುವ ಮೂಲಕ ಜನರನ್ನು ಮುಕ್ತಿಗೆ ಹತ್ತಿರ ಮಾಡಲು ಪ್ರಯತ್ನಿಸಿದರು. ಅದರ ಫಲವಾಗಿ ಶ್ರೇಷ್ಠ ವಚನ ಸಾಹಿತ್ಯ ಅನೇಕ ಶರಣರಿಂದ ಜನ್ಮ ತಾಳುವಂತಾಯಿತು. ಇದೇ ಸಮಯದಲ್ಲಿಯೇ ಅನೇಕ ಶರಣರು ಹಾಗೂ ಸಂತರ ಉಗಮವಾಗಿ ಆಧ್ಯಾತ್ಮಿಕ ಸಾಹಿತ್ಯ ಹೊರ ಬಂದಿರುವುದನ್ನು ಕಾಣುತ್ತೇವೆ. ಅತ್ಯಂತ ಶ್ರೇಷ್ಠ ಸಾಹಿತ್ಯವಾದ ಸಿದ್ಧಾಂತ ಶಿಖಾಮಣಿ ರಚನೆಯಾಗಿರುವುದಕ್ಕೆ ಮೂಲ ಕಾರಣ ಅಂದಿನ ಸುವ್ಯವಸ್ಥಿತವಾದ ನಂದಿ ಕೃಷಿ ಸಂಸ್ಕೃತಿಯಾಗಿದೆ.
ಕಳೆದ 9 ಶತಮಾನಗಳಲ್ಲಿ ಭಾರತದ ಮೇಲೆ ನಂದಿ ಕೃಷಿ ಸಂಸ್ಕೃತಿಯನ್ನು ಅರಿಯದ ವಿದೇಶಿಗರು ದಾಳಿ ಮಾಡುತ್ತಾ ಬಂದಾಗ ಸ್ಥಳೀಯ ಜನರಿಗೆ ದಾರಿ ತೋರಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಬಂದ ಶ್ರೇಯಸ್ಸು ಗುರು ವಿರಕ್ತ ಮಠಗಳ ಪೂಜ್ಯರಿಗೆ ಸಲ್ಲುತ್ತದೆ. "ಅನಾದಿ ಕಾಲದಿಂದ ಗುರು ಶಿಷ್ಯ ಪರಂಪರೆಯ ಮೂಲ ಕೊಂಡಿಯಾಗಿ ಕೆಲಸ ಮಾಡುತ್ತಾ ಬರುತ್ತಿರುವ ನಂದಿ ಕೃಷಿಯ ಮೇಲೆ ಸೃಷ್ಟಿಯ ಸಮತೋಲನೆ ನಿಂತಿದೆ" ಎಂಬ ಸತ್ಯದ ಅರಿವನ್ನು ವಿವಿಧ ಆಚರಣೆಗಳು ಹಾಗೂ ಜ್ಞಾನ ದಾಸೋಹದ ಮೂಲಕ ಧರ್ಮವನ್ನು ಉಳಿಸಿ ಬೆಳೆಸುತ್ತಾ ಪಂಚ ಪೀಠಾಧೀಶರು ಹಿಂದಿನಿಂದ ಬಂದಿದ್ದಾರೆ. ಭಾರತ ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳು ನಂದಿ ಕೃಷಿ ಸಂಸ್ಕೃತಿಯಿಂದ ಬೆಳೆದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ. ನಂದಿ ಕೃಷಿ ಸಂಸ್ಕೃತಿಯಿಂದ ಮಾತ್ರ ನಾಗರಿಕತೆ ಎಂಬ ಜ್ಯೋತಿ ಆರದಂತೆ ಉಳಿಯುವುದು ಎಂಬ ಸ್ಪಷ್ಟವಾದ ಸಂದೇಶ ನೀಡುವ ಶಕ್ತಿ ಕೇಂದ್ರಗಳು ಜ್ಯೋತಿರ್ಲಿಂಗಗಳಾಗಿವೆ. ದೇವರ ಜಾತ್ರೆಗಳಲ್ಲಿ ಬಳಸುವ ನಂದಿ ಧ್ವಜದಲ್ಲಿರುವ ಸೂರ್ಯ ಚಂದ್ರರ ಚಿತ್ರವು ಮಾನವ ಹಾಗೂ ನಂದಿ ನಡುವಿನ ಸಂಬಂಧ ಸೂರ್ಯ ಚಂದ್ರ ಇರುವವರೆಗೆ ಇರುತ್ತದೆ ಎಂಬುದರ ಸಂಕೇತವಾಗಿವೆ. ಜನರು ವಿಭಿನ್ನ ರೀತಿಯಲ್ಲಿ ಕಂಡರೂ ಕೂಡ ಅವರಲ್ಲಿ ಹರಿಯುವ ರಕ್ತ ಒಂದೇ ಆಗಿರುವಂತೆ ಸಮಾಜದಲ್ಲಿರುವ ವಿವಿಧ ಕಾಯಕಗಳ ತಾಯಿ ಬೇರು ನಂದಿ ಕೃಷಿಯಾಗಿದೆ ಎಂಬ ಸತ್ಯದ ಅರಿವು ಮೂಡಿಸುವ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಬರುವುದರ ಜೊತೆಗೆ ವಿದೇಶಿಗರ ಆಕ್ರಮಣದ ಸಂದರ್ಭದಲ್ಲಿ ನಿಜವಾದ ಕೃಷಿ ವಿಶ್ವವಿದ್ಯಾಲಯಗಳಾಗಿ ನೆಲೆ ನಿಂತು ಧರ್ಮವನ್ನು ಉಳಿಸುವ ಕಾರ್ಯವನ್ನು ವಿರಕ್ತ ಮಠಗಳು ಮಾಡಿವೆ.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಮಣ್ಣಿನ ಸಾವಯವ ಇಂಗಾಲ ಸರಾಸರಿ 0.75% ರಷ್ಟು ಇತ್ತು, ಆದರೆ ಇಂದು 0.33% ಕ್ಕೆ ಇಳಿಕೆಯಾಗಿ ಸೃಷ್ಟಿಯ ಸಮತೋಲನೆ ತಪ್ಪುತ್ತಿದೆ. ಇದಕ್ಕೆ ಮೂಲ ಕಾರಣ ತೈಲ ತತ್ವ ಆಧಾರಿತ ಯಂತ್ರಗಳಿಗೆ ಆದ್ಯತೆ ನೀಡಿ ನಂದಿ ಕೃಷಿ ಸಂಸ್ಕೃತಿಯನ್ನು ನಿರ್ಲಕ್ಷಿಸಿರುವುದಾಗಿದೆ. ಪ್ರತಿ ಗ್ರಾಮಗಳಲ್ಲಿ ನಂದಿ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ದೈಹಿಕ ಹಾಗೂ ಮಾನಸಿಕ ರೋಗಕ್ಕೆ ತುತ್ತಾಗುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಔಷಧಿಗಳಿಲ್ಲದ ಮನೆಗಳನ್ನು ನೋಡುವುದು ಕಷ್ಟವಾಗುತ್ತಿದೆ. ಇನ್ನು ಮುಂದೆ ಜಾಗತಿಕ ಯುದ್ಧಗಳಿಂದ ತೈಲ ಕೊರತೆಯಾದಂತೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜನರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಾ ಸಾಗುವುದು. ಯಾರು ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರಲು ಮಠ ಮಂದಿರಗಳಲ್ಲಿರುವ ನಂದಿ ಸಾಕ್ಷಿಯಾಗಿ ಪ್ರಯತ್ನಿಸುವರೋ ಅವರಿಗೆ ಮಾತ್ರ ಒಳ್ಳೆಯ ಭವಿಷ್ಯವಿದೆ. ರಾಜರ ಕಾಲದಲ್ಲಿ ರಾಜರಿಗೆ ಅರಿವು ಮೂಡಿಸಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸುವ ಪ್ರಯತ್ನವನ್ನು ಹಿಂದಿನ ಪೂಜ್ಯರು ಮಾಡಿದ್ದಾರೆ. ಆದರೆ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂದಿ ಮತ ಜಾಗೃತಿಯ ಮೂಲಕ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಗೊಳಿಸುವ ಸಾಮರ್ಥ್ಯ ಇರುವ ಜನಪ್ರತಿನಿಧಿಗಳು ಚುನಾವಣೆಗಳಲ್ಲಿ ಆಯ್ಕೆಯಾಗುವಂತೆ ಮಾಡಬೇಕಾಗಿದೆ.
ನಂದಿ ಸಂಪತ್ತು ನಾಶವಾದಂತೆ ವಿಶ್ವ ಮಟ್ಟದಲ್ಲಿ ಮಣ್ಣು ಹಾಗೂ ಮಾನವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವ ನಾಡಿನ ಪೂಜ್ಯರಿಗೆ ಮಾತ್ರವಿದೆ ಎಂಬುದು ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಅವರು ಜನ್ಮ ತಾಳಿದ ಬಿಜ್ಜರಗಿ ಗ್ರಾಮದ ಮನೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಕಳೆದ 3 ವರ್ಷಗಳಲ್ಲಿ ಸಾಗಿ ಬಂದ ಹಾದಿಯಿಂದ ತಿಳಿಯುತ್ತದೆ.
ಬಸವ ನಾಡಿನ ಅನೇಕ ಪೂಜ್ಯರು ತನು ಮನ ಧನದಿಂದ ನಂದಿ ಕೂಗು ಅಭಿಯಾನಕ್ಕೆ ಬೆಂಬಲವಾಗಿ ನಿಂತು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯದ ಕೋಟ್ಯಾಂತರ ಜನರಿಗೆ ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸಲು ಸಾಧ್ಯವಾಗಿದೆ. ಜಗತ್ತಿನಾದ್ಯಂತ ತೈಲ ಕೊರತೆಯಾದಂತೆ ನಂದಿ ಕೃಷಿ ಪುನಶ್ಚೇತನದ ಅವಶ್ಯಕತೆಯ ಅರಿವು ರಾಷ್ಟ್ರದ ಬಹು ಜನರಿಗೆ ಆಗುತ್ತಿದೆ. ಈ ಸಂದರ್ಭದಲ್ಲಿ ಬಸವ ನಾಡಿನ ಪೂಜ್ಯರು ಒಂದುಗೂಡಿ ರಾಜ್ಯದ 10 ಪ್ರತಿಶತ ಬಜೆಟ್ ನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಜಾರಿಗೆ ತಂದು ಇತರ ರಾಜ್ಯಗಳ ಪೂಜ್ಯರು ಹಾಗೂ ವಿಶ್ವದ ಎಲ್ಲ ಧಾರ್ಮಿಕ ಗುರುಗಳಿಗೆ ಮಾದರಿಯಾಗಿ ನಿಲ್ಲುವ ಅನಿವಾರ್ಯತೆ ಬಂದೊದಗಿದೆ. ಕನಿಷ್ಠ 50 ಸಾವಿರ ಕೋಟಿ ರೂಪಾಯಿಗಳನ್ನು ಮುಂದಿನ ರಾಜ್ಯ ಬಜೆಟ್ ನಲ್ಲಿ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ನೀಡುವ ಯೋಜನೆ ಹಾಗೂ ಎತ್ತುಗಳಿಂದ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಆರೋಗ್ಯವರ್ಧಕಗಳನ್ನು ಉತ್ಪಾದಿಸುವ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲು ಪೂಜ್ಯರೆಲ್ಲರು ಒಗ್ಗೂಡಿ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದರ ಜೊತೆಗೆ ನಂದಿ ಮತ ಜಾಗೃತಿ ಮಾಡುವ ನಿರ್ಧಾರವನ್ನು ಪೂಜ್ಯರೆಲ್ಲರು ಕೈಗೆತ್ತಿಕೊಂಡರೆ ರಾಜ್ಯದ ಎತ್ತುಗಳು ಹಾಗೂ ಆಕಳುಗಳು ಕಾಸಾಯಿಖಾನೆಯ ಪಾಲಾಗುವುದು ಕಡಿಮೆಯಾಗಿ ರೈತರ ಮನೆಗಳಲ್ಲಿ ಉಳಿಯಲು ಪ್ರಾರಂಭಿಸುವವು.
ನಂದಿ ಮತ ಜಾಗೃತಿಯಿಂದ ನಂದಿ ಮತ ಕ್ರೋಢೀಕರಣ ಸಾಧ್ಯತೆ:
ಬಸವ ನಾಡಿನಲ್ಲಿ ಎತ್ತಿನ ಕೃಷಿಕರು ಕಡಿಮೆಯಾದರೂ ಸಹ, ಎತ್ತುಗಳ ಆಧಾರಿತ ಪೂಜಾ ಸಂಪ್ರದಾಯವನ್ನು ಬಹು ಜನರು ಉಳಿಸಿ ಬೆಳೆಸಿಕೊಂಡು ಬಂದು ನಂದಿಯನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿದ್ದಾರೆ. ಅದಕ್ಕಾಗಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಬದ್ಧತೆಯನ್ನು ತೋರುವ ರಾಜಕೀಯ ನಾಯಕರಿಗೆ ಪಕ್ಷಾತೀತವಾಗಿ ಮತ ನೀಡುವ ಸಂಕಲ್ಪವನ್ನು ಮಾಡಿದವರಿಗೆ ಹಾಗೂ ವಿಶ್ವದ ಬಹು ಜನರಿಗೆ ಹೇಗೆ ಒಳಿತಾಗುವುದು ಎಂಬುವುದನ್ನು ಭಕ್ತರಿಗೆ ವೈಜ್ಞಾನಿಕವಾಗಿ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಕೃಷಿ ವಿಜ್ಞಾನಿಗಳನ್ನು ಮಠ ಮಂದಿರಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನಂದಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡುವುದರಿಂದ ಸರ್ವರಿಗೆ ಒಳಿತಾಗುವುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಬಸವ ನಾಡಿನ ಪೂಜ್ಯರೆಲ್ಲರೂ ಒಂದುಗೂಡಿ ತೆಗೆದುಕೊಂಡರೆ ರಾಷ್ಟ್ರ ಮಟ್ಟದ ನಂದಿ ಕ್ರಾಂತಿಗೆ ಮುನ್ನುಡಿ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ನಂದಿ ಮತ ಜಾಗೃತಿಯ ಕೆಲವು ಘೋಷ ವಾಕ್ಯಗಳು.
1. ವಿಭೂತಿ ಹಚ್ಚುವ ಕೈ ನಂದಿಗಾಗಿ ಮತ ನೀಡುವಂತಾಗಲಿ.
2. ಶಿವಾಲಯದ ಶಿವಲಿಂಗದ ಮುಂದಿರುವ ನಂದಿಗೆ ನಮಸ್ಕರಿಸುವ ಕೈ ನಂದಿಗಾಗಿ ಮತ ನೀಡುವಂತಾಗಲಿ.
3. ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿ ಇಟ್ಟು ಪೂಜಿಸುವ ಕುಟುಂಬಗಳು ನಂದಿಗಾಗಿ ಮತ ಮೀಸಲಿಡುವಂತಾಗಲಿ.
4. ತಿನ್ನುವ ಅನ್ನ ಸತ್ವಭರಿತವಾಗಿ ಇರಬೇಕಾದರೆ ನಂದಿಗಾಗಿ ಮತ ಮೀಸಲಿಡಿ.
5. ನಂದಿಯೊಂದಿಗೆ ಕೆಲಸ ಮಾಡುವ ರೈತನ ಬೆವರಿನ ಮೇಲೆ ನಮ್ಮ ಮಕ್ಕಳ ಭವಿಷ್ಯ ನಿಂತಿದೆ ಎಂಬುದನ್ನು ಅರಿತವರು ನಂದಿಗಾಗಿ ಮತ ಮೀಸಲಿಡಿ.
ರಾಜ್ಯದ 50 ಸಾವಿರ ಕೋಟಿ ರೂಪಾಯಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಕೃಷಿ ಹಾಗೂ ನಂದಿ ಶಕ್ತಿ ಕೆಂದ್ರಗಳಿಗೆ ಪ್ರೋತ್ಸಾಹ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳು:
1. ಮಠ ಮಂದಿರಗಳು ಹಾಗೂ ರೈತರ ನಡುವೆ ಪುನಃ ಬಾಂಧವ್ಯ ವೃದ್ಧಿಯಾಗುವುದರ ಜೊತೆಗೆ ಬಸವ ನಾಡಿನ ಮಠ ಮಂದಿರಗಳು ವಿಶ್ವಕ್ಕೆ ಕೃಷಿ ವಿಶ್ವವಿದ್ಯಾಲಯಗಳಾಗಿ ಮಾರ್ಗದರ್ಶನ ನೀಡಲು ಪ್ರಾರಂಭಿಸುವವು.
2. ನಂದಿ ಶಕ್ತಿ ಆಧಾರಿತ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುವುದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗಿ ಬಹು ಜನರಿಗೆ ಉದ್ಯೋಗ ಅವಕಾಶ ದೊರೆತು ಗ್ರಾಮಗಳು ಮರಳಿ ಸ್ವಾವಲಂಬಿಯಾಗುವವು.
3. ಮಣ್ಣು ಪುನಶ್ಚೇತನಾಗುವುದರ ಜೊತೆಗೆ ಹಳ್ಳ ಕೊಳ್ಳಗಳಲ್ಲಿ ಪುನಃ ಶುದ್ಧವಾದ ನೀರು ಹರಿಯಲು ಪ್ರಾರಂಭಿಸುವುದು. ಇದರಿಂದ ಮಲಿನವಾಗಿರುವ ಇಂದಿನ ನದಿಗಳು ಪುನಃ ಶುದ್ಧವಾಗುವವು.
4. ಗ್ರಾಮೀಣ ಹಾಗೂ ನಗರ ಜನರ ಆರೋಗ್ಯ ವೃದ್ಧಿಸುವುದರ ಜೊತೆಗೆ ಆಧ್ಯಾತ್ಮಿಕ ಪ್ರಪಂಚಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗುವುದು.
5. ಶಿವಲಿಂಗ ಪೂಜೆ, ಇಷ್ಟಲಿಂಗ ಪೂಜೆ ಹಾಗೂ ಹಠ ಯೋಗದ ಮೂಲಕ ಸೃಷ್ಟಿಯ ಜೀವ ಚಕ್ರವನ್ನು ಅರಿತು ಮುಕ್ತಿಗೆ ಹತ್ತಿರವಾಗುವ ಜನರ ಸಂಖ್ಯೆ ಹೆಚ್ಚಾಗುವುದು.
ಕಾಯವೇ ಕೈಲಾಸ ಹಾಗೂ ಕಾಯಕವೇ ಕೈಲಾಸ ಎಂಬ ತತ್ವಗಳು ನಂದಿ ಶಕ್ತಿಯ ಸದ್ಭಳಕೆಯ ಮೇಲೆ ನಿಂತಿದೆ. ಈ ಸತ್ಯವನ್ನು ವೈಜ್ಞಾನಿಕವಾಗಿ ಅರಿತು ಹೆಜ್ಜೆ ಇಡುವುದೇ ಸರ್ವ ಧರ್ಮದ ಜನರಿಗೆ ಒಳಿತು ಮಾಡುವ ಕಾರ್ಯವಾಗಿದೆ. ಸರ್ವೆ ಜನ ಸುಖಿನೊ ಭವಂತು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
missionsavesoil.com
....................................
ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ






.jpeg)





.jpeg)

.jpeg)
.jpeg)

.jpeg)
.jpeg)



.jpeg)

.jpeg)
.jpeg)

.jpeg)
.jpeg)

.jpeg)
.jpeg)

.jpeg)
.jpeg)

.jpeg)
.jpeg)

.jpeg)
.jpeg)
.jpeg)

.jpeg)
.jpeg)

