Thursday, July 16, 2026

ಜ್ಞಾನಯೋಗಿ ಶ್ರೀ ಸಿದ್ದೇಶ್ವರ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು" ಜಾರಿಗೆ ತರಲು ಸರ್ಕಾರಕ್ಕೆ ಹಕ್ಕೊತ್ತಾಯ ಏಕೆ ಮಾಡಬೇಕಾಗಿದೆ?

 



ಎತ್ತಿನ ಕೃಷಿ ಸಂಸ್ಕೃತಿಯು ಮಣ್ಣು ಹಾಗೂ ಮಾನವರ ಆರೋಗ್ಯವನ್ನು ವೃದ್ಧಿಸುತ್ತಾ ಸಾಗಿದರೆ, ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕ ಕೃಷಿಯು ಮಣ್ಣು ಹಾಗೂ ಜನರ ಆರೋಗ್ಯವನ್ನು ನಾಶ ಮಾಡುತ್ತಾ ಸಾಗುವುದು ಎಂಬುದು ವಿಶ್ವದ ಬಹುಜನರಿಗೆ ಅರಿವಾಗುತ್ತಿದೆ. ಎತ್ತಿನ ಕೃಷಿ ಸಂಸ್ಕೃತಿ‌ ನಾಶವಾದಂತೆ ವಿಶ್ವದ ಅರ್ಧಕ್ಕಿಂತ ಹೆಚ್ಚು ಮಣ್ಣು ಮರಳುಗಾಡಾಗಿ ಪರಿವರ್ತನೆಯಾಗುತ್ತಿದೆ ಹಾಗೂ ಬಹು ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂಬುದು ವಿಶ್ವ ಸಂಸ್ಥೆಯ ಅಂಕಿ ಅಂಶಗಳಿಂದ ತಿಳಿಯುತ್ತಿದೆ. 

ಮಣ್ಣು, ಮಾನವ, ನಂದಿ, ಶಿವಲಿಂಗ ಹಾಗೂ ಇಷ್ಟಲಿಂಗದ ಮಧ್ಯೆ ಇರುವ ವೈಜ್ಞಾನಿಕ ಸಂಬಂಧವನ್ನು ಅರಿತು‌ ನಡೆಯುವುದೇ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವತತ್ವದ ಮೂಲ ಉದ್ದೇಶವಾಗಿದೆ. ಗುರು ಶಿಷ್ಯ ಪರಂಪರೆಯ ಮೂಲ‌ ಕೊಂಡಿ ನಂದಿ ಕೃಷಿ ಸಂಸ್ಕೃತಿ ಆಗಿರುವ ಕಾರಣ ಮಠ ಮಂದಿರಗಳಲ್ಲಿ ಎತ್ತಿನ ಕೃಷಿಕರ ಭಾವೈಕ್ಯದ ಸಂಕೇತವಾದ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸುವ ಸಂಪ್ರದಾಯವಿದೆ. ಜಗತ್ತಿನಲ್ಲಿ ವಿವಿಧ ಆಚರಣೆಗಳ ಮೂಲಕ ಮಣ್ಣು ಹಾಗೂ ಎತ್ತುಗಳನ್ನು ಪೂಜಿಸುವ ಅತೀ ಹೆಚ್ಚು ಜನರನ್ನು ಹೊಂದಿದ ಭೂ ಪ್ರದೇಶ ಬಸವ ನಾಡಾಗಿರುವುದಕ್ಕೆ ಮೂಲ ಕಾರಣ ವಿಶ್ವಗುರು ಬಸವಣ್ಣನವರು ದೂರದೃಷ್ಟಿಕೋನದಿಂದ ನೀಡಿದ ಇಷ್ಟಲಿಂಗವಾಗಿದೆ ಎಂಬುದು 9 ಶತಮಾನಗಳ ಪರಕೀಯರ ದಾಳಿಯ ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ವಿಶ್ವದಲ್ಲಿ ಅತ್ಯಂತ ವಿಶೇಷವಾದ ಎತ್ತಿನ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಭೂ ಪ್ರದೇಶ ಬಸವ ನಾಡಾಗಿರುವುದಕ್ಕೆ ಮೂಲ ಕಾರಣ ಹಿಂದಿನ ಹಾಗೂ ಇಂದಿನ ಅನೇಕ ಮಠ ಮಂದಿರಗಳ ಪೂಜ್ಯರಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಮಣ್ಣು ಹಾಗೂ ಮಾನವರು ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ವಿಶ್ವಕ್ಕೆ ಮಾರ್ಗದರ್ಶನ ನೀಡುವ ಶಕ್ತಿ ಬಸವ ನಾಡಿನ ಪೂಜ್ಯರಿಗೆ ಮಾತ್ರವಿದೆ ಎಂಬುದು ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರೇರಣೆಯಿಂದ ಅವರು ಜನ್ಮ ತಾಳಿದ ಬಿಜ್ಜರಗಿ ಗ್ರಾಮದ ಮನೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ‌ ಕಳೆದ 3 ವರ್ಷಗಳಲ್ಲಿ ಸಾಗಿ ಬಂದ ಹಾದಿಯಿಂದ ತಿಳಿಯುತ್ತದೆ. 

ಬಸವ ನಾಡಿನ ಅನೇಕ ಪೂಜ್ಯರು ತನು ಮನ ಧನದಿಂದ ನಂದಿ ಕೂಗು ಅಭಿಯಾನಕ್ಕೆ ಬೆಂಬಲವಾಗಿ ನಿಂತು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯದ ಕೋಟ್ಯಾಂತರ ಜನರಿಗೆ ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸಲು ಸಾಧ್ಯವಾಗಿದೆ. ಜಗತ್ತಿನಾದ್ಯಂತ ತೈಲ ಕೊರತೆಯಾದಂತೆ ನಂದಿ ಕೃಷಿ ಪುನಶ್ಚೇತನದ ಅವಶ್ಯಕತೆಯ ಅರಿವು ರಾಷ್ಟ್ರದ ಬಹು ಜನರಿಗೆ ಆಗುತ್ತಿದೆ. ಈ ಸಂದರ್ಭದಲ್ಲಿ ಬಸವ ನಾಡಿನ ಪೂಜ್ಯರು ಒಂದುಗೂಡಿ ರಾಜ್ಯದ 10 ಪ್ರತಿಶತ ಬಜೆಟ್ ನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕಾಗಿ ಮೀಸಲಿಡುವ ಕಾನೂನನ್ನು ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಹೆಸರಿನಲ್ಲಿ ಜಾರಿಗೆ ತಂದು ಇತರ ರಾಜ್ಯಗಳ ಪೂಜ್ಯರು ಹಾಗೂ ವಿಶ್ವದ ಎಲ್ಲ ಧಾರ್ಮಿಕ ಗುರುಗಳಿಗೆ ಮಾದರಿಯಾಗಿ ನಿಲ್ಲುವ ಅನಿವಾರ್ಯತೆ ಬಂದೊದಗಿದೆ. ಕನಿಷ್ಠ 50 ಸಾವಿರ ಕೋಟಿ ರೂಪಾಯಿಗಳನ್ನು ಮುಂದಿನ ರಾಜ್ಯ ಬಜೆಟ್ ನಲ್ಲಿ ಮೀಸಲಿಡುವ ಕಾನೂನು ಜಾರಿಗೆ ತಂದು ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ನೀಡುವ ಯೋಜನೆ ಹಾಗೂ ಎತ್ತುಗಳಿಂದ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಆರೋಗ್ಯವರ್ಧಕಗಳನ್ನು ಉತ್ಪಾದಿಸುವ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೆ ತರಲು ಪೂಜ್ಯರೆಲ್ಲರು ಒಗ್ಗೂಡಿ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದರ ಜೊತೆಗೆ ನಂದಿ‌ ಮತ ಜಾಗೃತಿ ಮಾಡುವ ನಿರ್ಧಾರವನ್ನು ಪೂಜ್ಯರೆಲ್ಲರು ಕೈಗೆತ್ತಿಕೊಂಡರೆ ರಾಜ್ಯದ ಎತ್ತುಗಳು ಹಾಗೂ ಆಕಳುಗಳು ಕಾಸಾಯಿಖಾನೆಯ ಪಾಲಾಗುವುದು ಕಡಿಮೆಯಾಗಿ ರೈತರ ಮನೆಗಳಲ್ಲಿ ಉಳಿಯಲು ಪ್ರಾರಂಭಿಸುವವು.

ನಂದಿ ಮತ ಜಾಗೃತಿಯಿಂದ ನಂದಿ ಮತ ಕ್ರೋಢೀಕರಣ ಸಾಧ್ಯತೆ: 

ಬಸವ ನಾಡಿನಲ್ಲಿ ಎತ್ತಿನ ಕೃಷಿಕರು ಕಡಿಮೆಯಾದರೂ ಸಹ, ಎತ್ತುಗಳ ಆಧಾರಿತ ಪೂಜಾ ಸಂಪ್ರದಾಯವನ್ನು ಬಹು ಜನರು ಉಳಿಸಿ ಬೆಳೆಸಿಕೊಂಡು ಬಂದು ನಂದಿಯನ್ನು ತಮ್ಮ ಆರಾಧ್ಯ ದೈವವಾಗಿಸಿಕೊಂಡಿದ್ದಾರೆ. ಅದಕ್ಕಾಗಿ, ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಬದ್ಧತೆಯನ್ನು ತೋರುವ ರಾಜಕೀಯ ನಾಯಕರಿಗೆ ಪಕ್ಷಾತೀತವಾಗಿ ಮತ ನೀಡುವ ಸಂಕಲ್ಪವನ್ನು ಮಾಡಿದವರಿಗೆ ಹಾಗೂ ವಿಶ್ವದ ಬಹು ಜನರಿಗೆ ಹೇಗೆ ಒಳಿತಾಗುವುದು ಎಂಬುವುದನ್ನು ಭಕ್ತರಿಗೆ ವೈಜ್ಞಾನಿಕವಾಗಿ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ. ಕೃಷಿ ವಿಜ್ಞಾನಿಗಳನ್ನು ಮಠ ಮಂದಿರಗಳ ಕಾರ್ಯಕ್ರಮಗಳಿಗೆ ಆಹ್ವಾನಿಸಿ ನಂದಿಗಾಗಿ ಪಕ್ಷಾತೀತವಾಗಿ ಮತ ಮೀಸಲಿಡುವುದರಿಂದ ಸರ್ವರಿಗೆ ಒಳಿತಾಗುವುದರ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿರ್ಧಾರವನ್ನು ಬಸವ ನಾಡಿನ ಪೂಜ್ಯರೆಲ್ಲರೂ ಒಂದುಗೂಡಿ ತೆಗೆದುಕೊಂಡರೆ ರಾಷ್ಟ್ರ ಮಟ್ಟದ ನಂದಿ ಕ್ರಾಂತಿಗೆ ಮುನ್ನುಡಿ ಬರೆಯುವುದರಲ್ಲಿ ಯಾವುದೇ ಸಂಶಯವಿಲ್ಲ. 

ನಂದಿ ಮತ ಜಾಗೃತಿಯ ಕೆಲವು ಘೋಷ ವಾಕ್ಯಗಳು.

1. ವಿಭೂತಿ ಹಚ್ಚುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

2. ಶಿವಾಲಯದ ಶಿವಲಿಂಗದ ಮುಂದಿರುವ ನಂದಿಗೆ ನಮಸ್ಕರಿಸುವ ಕೈ ನಂದಿಗಾಗಿ ಮತ ನೀಡುವಂತಾಗಲಿ.

3. ಮನೆಯ ಜಗುಲಿಯ ಮೇಲೆ ನಂದಿ ಮೂರ್ತಿ ಇಟ್ಟು ಪೂಜಿಸುವ ಕುಟುಂಬಗಳು ನಂದಿಗಾಗಿ ಮತ ಮೀಸಲಿಡುವಂತಾಗಲಿ.

4. ತಿನ್ನುವ ಅನ್ನ ಸತ್ವಭರಿತವಾಗಿ ಇರಬೇಕಾದರೆ ನಂದಿಗಾಗಿ ಮತ ಮೀಸಲಿಡಿ.

5. ನಂದಿಯೊಂದಿಗೆ ಕೆಲಸ ಮಾಡುವ ರೈತನ ಬೆವರಿನ ಮೇಲೆ ನಮ್ಮ ಮಕ್ಕಳ ಭವಿಷ್ಯ ನಿಂತಿದೆ ಎಂಬುದನ್ನು ಅರಿತವರು ನಂದಿಗಾಗಿ ಮತ ಮೀಸಲಿಡಿ.

 ರಾಜ್ಯದ 50 ಸಾವಿರ ಕೋಟಿ ರೂಪಾಯಿ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಕೃಷಿ ಹಾಗೂ ನಂದಿ ಶಕ್ತಿ ಕೆಂದ್ರಗಳಿಗೆ ಪ್ರೋತ್ಸಾಹ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಆಗಬಹುದಾದ ಬದಲಾವಣೆಗಳು:

1. ಮಠ ಮಂದಿರಗಳು ಹಾಗೂ ರೈತರ ನಡುವೆ ಪುನಃ ಬಾಂಧವ್ಯ ವೃದ್ಧಿಯಾಗುವುದರ ಜೊತೆಗೆ ಬಸವ ನಾಡಿನ ಮಠ ಮಂದಿರಗಳು ವಿಶ್ವಕ್ಕೆ ಕೃಷಿ ವಿಶ್ವವಿದ್ಯಾಲಯಗಳಾಗಿ ಮಾರ್ಗದರ್ಶನ ನೀಡಲು ಪ್ರಾರಂಭಿಸುವವು. 

2. ನಂದಿ ಶಕ್ತಿ ಆಧಾರಿತ ಹೊಸ ತಂತ್ರಜ್ಞಾನಗಳು ಅಭಿವೃದ್ಧಿಯಾಗುವುದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗಿ ಬಹು ಜನರಿಗೆ ಉದ್ಯೋಗ ಅವಕಾಶ ದೊರೆತು ಗ್ರಾಮಗಳು ಮರಳಿ ಸ್ವಾವಲಂಬಿಯಾಗುವವು.

3. ಮಣ್ಣು ಪುನಶ್ಚೇತನಾಗುವುದರ ಜೊತೆಗೆ ಹಳ್ಳ ಕೊಳ್ಳಗಳಲ್ಲಿ ಪುನಃ ಶುದ್ಧವಾದ ನೀರು ಹರಿಯಲು ಪ್ರಾರಂಭಿಸುವುದು. ಇದರಿಂದ ಮಲಿನವಾಗಿರುವ ಇಂದಿನ ನದಿಗಳು ಪುನಃ ಶುದ್ಧವಾಗುವವು.

4. ಗ್ರಾಮೀಣ ಹಾಗೂ ನಗರ ಜನರ ಆರೋಗ್ಯ ವೃದ್ಧಿಸುವುದರ ಜೊತೆಗೆ ಆಧ್ಯಾತ್ಮಿಕ ಪ್ರಪಂಚಕ್ಕೆ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗುವುದು.

5. ಶಿವಲಿಂಗ ಪೂಜೆ, ಇಷ್ಟಲಿಂಗ ಪೂಜೆ ಹಾಗೂ ಹಠ ಯೋಗದ ಮೂಲಕ ಸೃಷ್ಟಿಯ ಜೀವ ಚಕ್ರವನ್ನು ಅರಿತು ಮುಕ್ತಿಗೆ ಹತ್ತಿರವಾಗುವ ಜನರ ಸಂಖ್ಯೆ ಹೆಚ್ಚಾಗುವುದು.

ಕಾಯವೇ ಕೈಲಾಸ ಹಾಗೂ ಕಾಯಕವೇ ಕೈಲಾಸ ಎಂಬ ತತ್ವಗಳು ನಂದಿ ಶಕ್ತಿಯ ಸದ್ಭಳಕೆಯ ಮೇಲೆ‌ ನಿಂತಿದೆ. ಈ ಸತ್ಯವನ್ನು ವೈಜ್ಞಾನಿಕವಾಗಿ ಅರಿತು ಹೆಜ್ಜೆ ಇಡುವುದೇ ಸರ್ವ ಧರ್ಮದ ಜನರಿಗೆ ಒಳಿತು ಮಾಡುವ ಕಾರ್ಯವಾಗಿದೆ.‌ ಸರ್ವೆ ಜನ‌ ಸುಖಿನೊ ಭವಂತು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com

....................................

ಬಸವರಾಜ ಎನ್. ಬಿರಾದಾರ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ


No comments:

Post a Comment

ಗುರು ವಿರಕ್ತ ಮಠಗಳ ಪೂಜ್ಯರು ಹಾಗೂ ಭಕ್ತರ ನಂದಿ ಮತ ಜಾಗೃತಿಯ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?

  ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮ...