Sunday, June 14, 2026

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

 

ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ?

ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯಿಂದ ಜನ್ಮ ತಾಳಿದ ಬಸವಣ್ಣನವರು ಬಸವ ಕಲ್ಯಾಣಕ್ಕೆ ಬಂದು ಪರುಷ ಕಟ್ಟೆಯ ಮೇಲೆ ನ್ಯಾಯ ಪಂಚಾಯತಿ ಮಾಡುತ್ತಾ ವಿಶ್ವಕ್ಕೆ ಅನ್ವಯವಾಗುವ ನಂದಿ ತತ್ವ ಅಥವಾ ಎತ್ತಿನ ಕೃಷಿಕರ ತತ್ವವನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ ಕಾರಣಕ್ಕಾಗಿ ಅವರು ವಿಶ್ವಗುರು ಆದರು ಎಂಬುದು ಅವರೇ ಬರೆದ ವಚನವನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದಾಗ ತಿಳಿಯುತ್ತದೆ.

ಕೃಷಿ ಕೃತ್ಯ ಕಾಯಕ ಮಾಡುವ 
ಸದ್ಭಕ್ತನ ಪಾದವ ತೋರಿಸಿ ಬದುಕಿಸಯ್ಯಾ,
ಆತನ ತನು ಶುದ್ಧ, ಆತನ ಮನ ಶುದ್ಧ, 
ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ ಸಂಗಮದೇವ.

"ನಂದಿ ಅಥವಾ ಜೋಡೆತ್ತಿನ ಕೃಷಿಕರ ಪಾದಗಳಿಲ್ಲದಿದ್ದರೆ ನಾನು ಬದುಕಿರಲು ಸಾಧ್ಯವಿಲ್ಲ" ಎಂದು ಬಸವಣ್ಣನವರು ಹೇಳಿದ ಮಾತು 'ಗುರು' ಎಂಬ ಶಬ್ದ ಎತ್ತಿನ ಕೃಷಿಕರ ಶ್ರಮದಿಂದ ನಿರ್ಮಾಣವಾದ ನಾಗರೀಕ ಸಮಾಜದಿಂದ ಜನ್ಮ ತಾಳಿದೆ ಎಂಬುದು ತಿಳಿಯುತ್ತದೆ. ನಂದಿ ಶಕ್ತಿ ಹಾಗೂ ನಂದಿ ಕೃಷಿಕರ ಶ್ರಮದಿಂದ ಅಭಿವೃದ್ಧಿ ಹೊಂದಿದ ನಾಗರೀಕ ಸಮಾಜದ ಗುರುಗಳಿಂದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಜನ್ಮ ತಾಳಿದವು ಎಂಬುದು ಬಸವಣ್ಣನವರ ವಚನದಿಂದಲೇ ತಿಳಿಯುತ್ತದೆ. ಅದೇ ಕಾರಣಕ್ಕೆ ಶಿವಾಲಯದ ಶಿವಲಿಂಗದ ಮುಂದೆ ಹಾಗೂ ಲಿಂಗಾಯತರ ಜಗುಲಿಯ ಮೇಲೆ‌ ನಂದಿ ಮೂರ್ತಿ ಇಟ್ಟು ಪೂಜಿಸುವುದನ್ನು ಕಾಣುತ್ತೇವೆ. ಜೋಡೆತ್ತಿನ ಕೃಷಿಕರ ಶ್ರಮದಿಂದ ಜನ್ಮ ತಾಳಿದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಕೌಟುಂಬಿಕ ಹಾಗೂ ಪಾರಮಾರ್ಥಿಕವಾಗಿ ನಾಗರೀಕತೆ ಬೆಳೆಯಲು ದಾರಿ ತೋರುವ ಭೂಮಿಯ ಮೇಲಿನ  ಶ್ರೇಷ್ಠ ವೈಜ್ಞಾನಿಕ ಪೂಜಾ ಸಂಪ್ರದಾಯಗಳಾಗಿವೆ. ಕಳೆದ 50 ವರ್ಷಗಳಲ್ಲಿ ನಂದಿ ಕೃಷಿಕರ ಶ್ರಮವನ್ನು ನಿರ್ಲಕ್ಷಿಸಿ ಜಗತ್ತಿನಾದ್ಯಂತ ಜಾರಿಗೆ ತರುತ್ತಿರುವ ತೈಲ‌ ಶಕ್ತಿ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳಿಗೆ ಪೂರಕ ಕಾನೂನುಗಳಿಂದ ವಿಶ್ವದ ಅರ್ಧಕ್ಕಿಂತ ಹೆಚ್ಚು ಜನ ಹಲವು ರೋಗಗಳಿಗೆ ತುತ್ತಾಗಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡು ಬಳಲುತ್ತಿದ್ದಾರೆ.  ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತಂದು ನಂದಿ ಸಂಪತ್ತು ಕಾಸಾಯಿಖಾನೆ ಪಾಲಾಗದೆ ರೈತರ ಮನೆಗಳಲ್ಲಿ ಉಳಿಯುವಂತೆ ಮಾಡಿದರೆ ಮಾತ್ರ ಇಂದಿನ ನಾರೀಕತೆಯ ಜನರು ಸ್ವಾಸ್ಥ್ಯದಿಂದ ಜೀವನ ನಡೆಸಲು ಸಾಧ್ಯವೆಂಬುದು ವೈಜ್ಞಾನಿಕವಾಗಿ ತಿಳಿಯುತ್ತಿದೆ. ಈ ಸತ್ಯದ ಅರಿವನ್ನು ಮೂಡಿಸುವ ವಚನವನ್ನು ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಬರೆದಿರುವುದು ಅವರ ವೈಜ್ಞಾನಿಕ ಹಾಗೂ ದೂರದೃಷ್ಟಿಕೋನದ ಚಿಂತನೆಗೆ ಹಿಡಿದ ಕನ್ನಡಿಯಾಗಿದೆ.

ನಂದಿ ಕೃಷಿಕರ ಶ್ರಮದಿಂದ ಅಭಿವೃದ್ದಿ ಹೊಂದಿದ ಸಮಾಜದಲ್ಲಿ ವಿಶ್ವತೋಮುಖ ಚಿಂತನೆಗಳಿಗೆ ಅವಕಾಶ ದೊರೆತು ವಿಶ್ವ ಪ್ರಜ್ಞೆಯ ಸಂಕೇತವಾದ ಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬರಲು ಪ್ರಾರಂಭಿಸುವುದು. ಕಳೆದ 5 ಸಾವಿರ ವರ್ಷಗಳಿಂದ ನಂದಿ ಕೃಷಿಕರ ಶ್ರಮದಿಂದ ನಾಗರೀಕತೆ ಬೆಳೆಯುತ್ತಾ ಬಂದಾಗ 6ನೇ ಶತಮಾನದಲ್ಲಿ ಶಿವಲಿಂಗದ ಪರಿಕಲ್ಪನೆ ಮುನ್ನೆಲೆಗೆ ಬಂದು ಶಿವಾಲಯಗಳು ನಿರ್ಮಾಣವಾಗಲು ಪ್ರಾರಂಭಿಸಿದವು. 12ನೇ ಶತಮಾನದ ಕಾಲಘಟ್ಟದಲ್ಲಿ ಉತ್ತರ ಭಾರತದಲ್ಲಿ ನಿರ್ಮಿತವಾದ ಶಿವಾಲಯಗಳು ಮುಸಲ್ಮಾನರ ದಾಳಿಯಿಂದ‌ ಧ್ವಂಸವಾಗಿ ಶಿವಲಿಂಗ ಪೂಜಾ ಸಂಸ್ಕೃತಿ ನಾಶವಾಗುತ್ತಿರುವುದನ್ನು ಗಮನಿಸಿದ ಬಸವಣ್ಣನವರು ಮುಂದೆ ದಕ್ಷಿಣ ಭಾರತದ ಶಿವಾಲಯಗಳು ಧ್ವಂಸವಾಗುವ ಕಾಲ ಹತ್ತಿರವಾಗುತ್ತಿದೆ ಎಂಬುದನ್ನು ದೂರ ದೃಷ್ಟಿಕೋನದಿಂದ ಅರಿತರು. ಶಿವಾಲಯಗಳು ಧ್ವಂಸವಾಗುವುದು ಎಂದರೆ ದೇಶದ ಕೃಷಿ ಸಂಸ್ಕೃತಿ ಹಾಗೂ ನಾಗರೀಕತೆ ನಾಶವಾಗುವುದು ಎಂದು ಅರ್ಥ. ಈ ಸತ್ಯವನ್ನು ಅರಿತ ಬಸವಣ್ಣನವರು ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದು ಇಷ್ಟಪಟ್ಟವರು ಇಷ್ಟಲಿಂಗ ಧರಿಸಿ ಲಿಂಗ ಪೂಜಾ ಸಂಪ್ರದಾಯವನ್ನು ತಮ್ಮ‌ ಮನೆಗಳಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂಬುದು ಬಸವಣ್ಣನವರ ಉದ್ದೇಶವಾಗಿತ್ತು. ಜೊತೆಗೆ ನಮ್ಮ ನಂದಿ ಕೃಷಿ ಸಂಸ್ಕೃತಿಗೆ ಧಕ್ಕೆ ಆಗಬಹುದಾದ ಸಂದರ್ಭದಲ್ಲಿ ಲಿಂಗ ಹಾಗೂ ಜಗುಲಿಯ ಮೇಲಿರುವ ನಂದಿ ಆಧಾರಿತವಾಗಿ ಜನರು ಒಗ್ಗೂಡಿ ಪರಿಹಾರ ಕಂಡುಕೊಳ್ಳುತ್ತಾ ಸಾಗಿ, ನಾಗರೀಕತೆ ಬೆಳೆಯುತ್ತಾ ಸಾಗಬೇಕು ಎಂಬುದು ಬಸವಣ್ಣನವರ ದೂರದೃಷ್ಟಿಕೋನವಾಗಿತ್ತು.  ಕಳೆದ 9 ಶತಮಾನಗಳಲ್ಲಿ ಅನೇಕರು ನಮ್ಮ ಮಣ್ಣಿನ ಸಂಸ್ಕೃತಿಯ ಮೇಲೆ ಆಕ್ರಮಣ ಮಾಡಿದಾಗ ಜನರು ಚದುರಿ ಹೋದರೂ ಸಹ ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ ಮರಳಿ ಒಂದಾಗಿ ಮಣ್ಣಿನ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಇಷ್ಟಲಿಂಗ ಪೂಜಾ ಸಂಪ್ರದಾಯದಿಂದ‌ ಕಾಲ ಕಾಲಕ್ಕೆ ಅನೇಕ‌ ಶರಣರು ಹಾಗೂ ಸಂತರು ಉದಯಿಸಿ ನಮ್ಮ ದೇಸಿ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾ ಬಂದಿರುವುದರ ಸಾಕ್ಷಿಯಾಗಿ ಅನೇಕ ಬೃಹತ್ ನಂದಿ ದೇವಸ್ಥಾನಗಳು ನಿರ್ಮಾಣ ಆಗಿರುವುದನ್ನು ಅನೇಕ ಕಡೆ ಕಾಣುತ್ತೇವೆ. 

12ನೇ ಶತಮಾನದಲ್ಲಿ ಬಸವಣ್ಣನವರು‌ ನ್ಯಾಯ ಪಂಚಾಯಿತಿ ನಡೆಸುತ್ತಿದ್ದ ಪರುಷ ಕಟ್ಟೆ ಸುತ್ತಲೂ ಇರುವ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯದ ಅಂದಿನ ಮನೆಗಳು ನಾಶವಾಗಿ ಇಂದು ಮುಸಲ್ಮಾನರ‌ ಮನೆಗಳು ತಲೆ ಎತ್ತಿ ನಿಂತಿವೆ. ಬಸವಣ್ಣನವರ ಕಾಲದ ಪರುಷ ಕಟ್ಟೆಯ ವೈಭವ ಹಾಗೂ ಇಂದಿನ ಅದರ ದುಸ್ಥಿತಿಯನ್ನು ಅವಲೋಕನೆ ಮಾಡಿದರೆ ಬಸವವಣ್ಣನವರು ಯಾವ ಉದ್ದೇಶದಿಂದ ಇಷ್ಟಲಿಂಗ ಪರಿಕಲ್ಪನೆಯನ್ನು ಮುನ್ನೆಲೆಗೆ ತಂದರು ಎಂಬುದು ನಮಗೆಲ್ಲ ಅರಿವು ಆಗುತ್ತದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸ್ಥಾಪಿತ ವಿಶ್ವದ ಮೊದಲ ಸಂಸತ್ತು ಹಾಗೂ 21ನೇ ಶತಮಾನದಲ್ಲಿ  ಪ್ರಜಾಪ್ರಭುತ್ವ ವ್ಯವಸ್ಥೆಯ ಸಂವಿಧಾನದ ರಚನೆಯ ಹಿಂದೆ ನಂದಿ ಕೃಷಿಕರ ಶ್ರಮ ಅಡಗಿದೆ  ಎಂಬುದಕ್ಕೆ ಸಂವಿಧಾನದಲ್ಲಿರುವ ಸಿಂಧೂ ನದಿ ನಾಗರೀಕತೆಯ ನಂದಿ ಮುದ್ರೆಯು ಸಾಕ್ಷಿಯಾಗಿದೆ. ಅಂದರೆ, ನಂದಿ ಕೃಷಿ ಸಂಸ್ಖರತಿಯಿಂದ ನಾಗರೀಕತೆ ಬೆಳವಣಿಗೆಗೆ ಶ್ರೇಷ್ಠ ಕೊಡುಗೆ ನೀಡುತ್ತಾ ಬಂದಿರುವ ವೀರಶೈವರು ಹಾಗೂ ಲಿಂಗಾಯತರು ಸಂವಿಧಾನ ರಚನೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ತಿಳಿಯುತ್ತದೆ. 

ಕಳೆದ ಎರಡು ಶತಮಾನದಲ್ಲಿ ಜಾರಿಯಾಗುತ್ತಾ ಬಂದಿರುವ ದೇಸಿ ಕೃಷಿ ಸಂಸ್ಕೃತಿಗೆ ವಿರುದ್ಧವಾದ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಹಾಗೂ ತೈಲ ಆಧಾರಿತ ಕೃಷಿಯಿಂದಾಗಿ ವಿಶ್ವಗುರು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವದ ಮೂಲ ಬೇರುಗಳಾದ ನಂದಿ ಅಥವಾ ಜೋಡೆತ್ತಿನ ಕೃಷಿಕರು ಅಳಿವಿನ ಅಂಚಿಗೆ ಬಂದು ನಿಲ್ಲುವಂತಾಗಿದೆ. ಬೇರುಗಳಿಲ್ಲದ ಮರವು ಹೇಗೆ ಫಲ ಕೊಡಲು ಸಾಧ್ಯವಿಲ್ಲವೋ ಅದೇ ರೀತಿ  ನಂದಿ ಕೃಷಿಕರೆಂಬ ಬೇರುಗಳಿಲ್ಲದೆ ಬಸವ ತತ್ವ ಯಾವುದೇ ಫಲ ಕೊಡದೆ ಸೊರಗುತ್ತಿದೆ.  ನಂದಿ ಕೃಷಿಕರ ಶ್ರಮ ಹಾಗೂ ಅವರು ನಾಗರೀಕತೆ ಬೆಳವಣಿಗೆಗೆ ನೀಡುತ್ತಾ ಬಂದಿರುವ ಶ್ರೇಷ್ಠ ಕೊಡುಗೆಯನ್ನು ಪರಿಗಣಿಸದೆ ವಿಶ್ವದ ಎಲ್ಲ ದೇಶಗಳು ಜಾರಿಗೆ ತರುತ್ತಿರುವ ಕಾನೂನು ಹಾಗೂ ಯೋಜನೆಗಳು ಇಂದಿನ ಬಸವ ತತ್ವ ಪ್ರತಿಪಾದಕರು ದಾರಿ ಕಾಣದೆ ಒದ್ದಾಡುವಂತೆ ಮಾಡುತ್ತಿದೆ. ಇಂದು ಅನೇಕ ಪೂಜ್ಯರ ನಡುವೆ ವಾದ ವಿವಾದಗಳು ನಡೆಯುತ್ತಿರುವುದಕ್ಕೆ ಮೂಲ‌ ಕಾರಣ ಬಸವ ತತ್ವಕ್ಕೆ ವಿರುದ್ಧವಾದ ವ್ಯವಸ್ಥೆ ವಿಶ್ವಾದ್ಯಾಂತ ನಿರ್ಮಾಣ ಆಗಿರುವುದಾಗಿದೆ. ಈ ಸತ್ಯವನ್ನು ಅರಿಯದೆ ಹೆಜ್ಜೆ ಇಡುವ ಅನೇಕ ದೇಶಗಳು ನಾಶವಾಗುವ ದಿನಗಳು ಹತ್ತಿರವಾಗುತ್ತಿವೆ.

ಜಗತ್ತಿನಾದ್ಯಂತ ಸೃಷ್ಟಿಯಾಗುತ್ತಿರುವ ತೈಲ ಸಂಕಷ್ಟಕ್ಕೆ ಮಠ ಮಂದಿರಗಳಲ್ಲಿರುವ ನಂದಿ ಮೂರ್ತಿಗಳ ಆಧಾರಿತವಾಗಿ ಒಗ್ಗೂಡಿ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. 

ಈ ಸಂದರ್ಭದಲ್ಲಿ ಬಸವ ಕಲ್ಯಾಣದ ಪರುಷ ಕಟ್ಟೆ ಕೂಗಿ ಹೇಳುತ್ತಿರುವ ನಂದಿ ಕೃಷಿ ಸಂಸ್ಕೃತಿಯ ಇತಿಹಾಸವನ್ನು ಆಲಿಸಿ ಹೆಜ್ಜೆ ಇಡಬೇಕಾಗಿದೆ. ಎಲ್ಲ ಪೂಜ್ಯರು ಬಸವ ತತ್ವದ ಮೂಲ ಬೇರುಗಳಾದ ನಂದಿ ಕೃಷಿಕರಿಗೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಒಂದಾಗಿ ಹೆಜ್ಜೆ ಇಟ್ಟು ನಂದಿ ಸಂತತಿ ರೈತರ ಮನೆಗಳಲ್ಲಿ ಉಳಿಸಲು ಪ್ರಯತ್ನಿಸಿದರೆ ಮಾತ್ರ ಬಸವಣ್ಣನವರು ದೂರದೃಷ್ಟಿಕೋನದಿಂದ ಇಟ್ಟ ಹೆಜ್ಜೆ ಇಂದು ಸಾರ್ಥಕ ರೂಪ ತಾಳುತ್ತದೆ. ಇದು ವಿಶ್ವ ಮಟ್ಟದಲ್ಲಿ ಇಡುವ ಕ್ರಾಂತಿಕಾರಕ ಹೆಜ್ಜೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಏಕೆಂದರೆ, ಭಾರತದ ಸಂವಿಧಾನ ಹಾಗೂ ವಿಶ್ವದ ಬಹು ಜನರ ಭವಿಷ್ಯ ವೀರಶೈವ ಲಿಂಗಾಯತ ಪೂಜ್ಯರು ಇಡುವ ಮುಂದಿನ ಹೆಜ್ಜೆಯ ಮೇಲೆ ನಿಂತಿದೆ.

ನಂದಿ ಶಕ್ತಿಯು ಭೂಮಿಯ ಜೀವಂತಿಕೆಯನ್ನು ಹೆಚ್ಚಿಸುತ್ತಾ ಎಲ್ಲ ಧರ್ಮಗಳು ಉಳಿಯುವಂತೆ ಮಾಡುವುದು. ತೈಲ‌ ಶಕ್ತಿಯು ಭೂಮಿಯ ಜೀವಂತಿಕೆಯನ್ನು ನಾಶ ಮಾಡುತ್ತಾ ಎಲ್ಲ ಧರ್ಮ‌ಗಳು ನಾಶವಾಗುವಂತೆ ಮಾಡುವುದು. ಹಾಗಾಗಿ, ಅರಿವಿನ ಕೊರತೆಯಿಂದ ಇತಿಹಾಸದಲ್ಲಿ ಆಗುತ್ತಾ ಬಂದಿರುವ ಪ್ರಮಾದವನ್ನು ಸರಿಪಡಿಸಲು ವೈಜ್ಞಾನಿಕ ಚಿಂತನೆಗಳು ಜರುಗಬೇಕಾಗಿವೆ. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಯ ಮೂಲಕ ನಂದಿ ಕೃಷಿ ಪುನಶ್ಚೇನದ ಕುರಿತು ಹಲವು ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗುತ್ತಿದೆ. ನಾಡಿನ ಅನೇಕ ಪೂಜ್ಯರು ಆಶಿರ್ವಾದ ಮಾಡುತ್ತಾ ಬಂದಿರುವ ಕಾರಣ ರಾಜ್ಯ ಮಟ್ಟದಲ್ಲಿ ಅಭಿಯಾನ ಹೆಸರುವಾಸಿಯಾಗಿದೆ. ಮುಂದುವರೆದು 108 ಗ್ರಾಮಗಳ ನಂದಿ ಕೃಷಿಕರ ಸಮಾವೇಶ ಆಯೋಜಿಸಿ ಈ‌ ಕೆಳಗಿನ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 

ಸರ್ಕಾರಕ್ಕೆ ನಂದಿ ಕೃಷಿಕರ ಹಕ್ಕೊತ್ತಾಯ: 

1. ಜೋಡೆತ್ತಿನ ಕೃಷಿಕರನ್ನು ಬಸವ ತತ್ವದ ಮೂಲ ಬೇರುಗಳೆಂದು ಗುರುತಿಸಿ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿ ಗೊಳಿಸಿ.

2. ನಂದಿ ಕೃಷಿ ಪುನಶ್ಚೇತನಕ್ಕಾಗಿ ರಾಜ್ಯದ 10 ಪ್ರತಿಶತ ಬಡ್ಜೆಟ್ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆರೋಗ್ಯ ವರ್ಧಕಗಳು ಹಾಗೂ ನಂದಿ ಗೊಬ್ಬರಗಳ ತಯಾರಿಕೆಗೆ ಉತ್ತೇಜನ ನಿಡುವ ಕಾನೂನು ಜಾರಿ ಗೊಳಿಸಿ.

 ನಂದಿ ಕೃಷಿಕರಿಗೆ ನ್ಯಾಯ ಒದಗಿಸಲು ಪೂಜ್ಯರ "ನಂದಿ ನಿರ್ಧಾರ" 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಅರಿವಿನ ಕೊರತೆಯಿಂದ ಸರ್ವರ ಒಳಿತಿನ ಬಸವ ತತ್ವದ ಮೂಲ ಬೇರಾದ‌ ನಂದಿ ಕೃಷಿ ನಾಶವಾಗುತ್ತಿದೆ. ಅದಕ್ಕಾಗಿ, ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಯೋಜನೆ ಹಾಗೂ ಕಾನೂನು ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ನಂಬಿದ ದೇವರ ಸಾಕ್ಷಿಯಾಗಿ ಪಕ್ಷಾತೀತವಾಗಿ ಮತ ನೀಡಲು ಪೂಜ್ಯರು ತಮ್ಮ ಭಕ್ತರಿಗೆ ಅರಿವು ಮೂಡಿಸುವ "ನಂದಿ ನಿರ್ಧಾರ" ತೆಗೆದುಕೊಳ್ಳಬೇಕಾದ ಅವಶ್ಯಕತೆ ಕುರಿತು ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡಬಹುದಾಗಿದೆ.

......................................

ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

No comments:

Post a Comment

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...