ರೈತರಿಂದ ಪೂಜ್ಯರಿಗೆ ಮನವಿ: ನಂದಿ ಶಕ್ತಿಯ ಬಳಕೆಯಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವುದಕ್ಕೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ರಾಜಕೀಯ ನಾಯಕರಿಗೆ ನಂಬಿದ ದೇವರ ಸಾಕ್ಷಿಯಾಗಿ ಮತ ನೀಡುವಂತೆ ಪೂಜ್ಯರು ಒಂದುಗೂಡಿ ಭಕ್ತರಿಗೆ ಅರಿವು ಮೂಡಿಸುವ ನಿರ್ಣಯ ತೆಗೆದುಕೊಳ್ಳಲು ರೈತರಿಂದ ಪೂಜ್ಯರಿಗೆ ಮನವಿ ಮಾಡಿಕೊಳ್ಳುವ ಕಾರ್ಯಕ್ರಮವನ್ನು ವಿಶ್ವಗುರು ಬಸವಣ್ಣನವರು ನ್ಯಾಯ ಪಂಚಾಯತಿ ನಡೆಸುತ್ತಿದ್ದ ಬಸವಕಲ್ಯಾಣದ ಪರುಷ ಕಟ್ಟೆಯಿಂದ ದಿನಾಂಕ: 26-06-2026 ರಂದು ಪ್ರಾರಂಭಿಸಲಾಗಿದೆ.
🙏ವಿಷಯ ವಿಶ್ಲೇಷಣೆ 🙏
ಉದ್ದೇಶ: ಆಧುನಿಕ ಕೃಷಿಯಿಂದ ಜಗತ್ತಿನ ಅರ್ಧಕ್ಕಿಂತ ಹೆಚ್ಚು ಮಣ್ಣು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಿವೆ. ಇದರ ದುಷ್ಪರಿಣಾಮವು ಹಲವು ರೋಗಗಳು ಹಾಗೂ ಹವಾಮಾನ ವೈಪರೀತ್ಯಗಳ ಮೂಲಕ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಹಿಂದೆ ಕೃಷಿ ವಿಶ್ವವಿದ್ಯಾಲಯಗಳು ಇಲ್ಲದಿದ್ದರೂ ಕೂಡ ಮಣ್ಣಿನ ಫಲವತ್ತತೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಾಣ ಮಾಡಿರುವುದಕ್ಕೆ ಮುಖ್ಯ ಕಾರಣ ನಂದಿ ಕೃಷಿ ಕಾಯಕಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತಾ ಬಂದಿರುವ ಹಿಂದಿನ ಮಠ-ಮಂದಿರಗಳ ಪೂಜ್ಯರಾಗಿದ್ದಾರೆ ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಹಿಂದೆ ಮಠ ಮಂದಿರಗಳು ನಿಜವಾದ ಕೃಷಿ ವಿಶ್ವವಿದ್ಯಾಲಯಗಳಾಗಿ ಕೆಲಸ ಮಾಡಿವೆ ಎಂಬುದಕ್ಕೆ ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ಸಾಕ್ಷಿಯಾಗಿವೆ. ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ರಾಷ್ಟ್ರದ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ. ನಂದಿ ಕೃಷಿಕರಿಂದ ಜಂಗಮ, ಬಡಿಗೇರ, ಕಂಬಾರ, ಕುಂಬಾರ, ಮಡಿವಾಳ, ಚಮ್ಮಾರ, ಹೀಗೆ ಅನೇಕರಿಗೆ ಕಾಯಕದ ಭದ್ರತೆ ದೊರೆಯುತ್ತಾ ಬಂದಿದೆ. ಇಂದು ಕೇವಲ ಒಂದು ವರ್ಷ ತೈಲ ಪೂರೈಕೆ ನಿಂತರೆ ಟ್ರಾಕ್ಟರ್ ಅವಲಂಬಿತ ಕೃಷಿ ಸ್ಥಗಿತವಾಗಿ ಬಹು ಜನರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ನಿರ್ಮಾಣವಾಗುವುದು. ಜಾಗತಿಕ ಯುಧ್ದಗಳಿಂದ ತೈಲ ಕೊರತೆಯಾದಂತೆ ಕೃಷಿ ಅವಲಂಬಿತ ಕಾಯಕಗಳು ನಾಶವಾಗುವವು. ಹಾಗಾಗಿ, ಸೂರ್ಯ ಚಂದ್ರ ಇರುವವರೆಗೆ ರೈತರಿಗೆ ಹಾಗೂ ಸರ್ವರಿಗೆ ಕಾಯಕದ ಭದ್ರತೆ ನೀಡುವುದು ನಂದಿ ಶಕ್ತಿಯಾಗಿದೆ. ಇದೇ ಕಾರಣಕ್ಕೆ ಮಠ ಮಂದಿರಗಳ ಜಾತ್ರೆಗಳ ಸಂದರ್ಭದಲ್ಲಿ ಬಳಸುವ ನಂದಿ ಧ್ವಜದಲ್ಲಿ ನಂದಿ ಚಿತ್ರದ ಜೊತೆಗೆ ಸೂರ್ಯ ಚಂದ್ರರ ಚಿತ್ರ ಇರುವುದನ್ನು ಕಾಣುತ್ತೇವೆ. ವರ್ಷದಲ್ಲಿ ಬರುವ 12 ಅಮವಾಸ್ಯೆ-ಹುಣ್ಣಿಮೆಯ ಹಬ್ಬಗಳು ನಂದಿ ಕೃಷಿ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಆಚರಣೆಗಳಾಗಿವೆ. ಇದೇ ಕಾರಣಕ್ಕೆ ನಂದಿ ಕೃಷಿ ನಾಶವಾದಂತೆ ಸಂಸ್ಕೃತಿ ಎಂಬ ಶಬ್ದ ಅರ್ಥ ಕಳೆದುಕೊಳ್ಳುತ್ತಿದೆ.
ಆಧುನಿಕ ಜಗತ್ತಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಹೆಚ್ಚಾದಂತೆ ರೈತರು ಕೃಷಿಯಿಂದ ವಿಮುಖರಾಗಿ ಭವಿಷ್ಯ ಮಂಕಾಗುತ್ತಿರುವುದಕ್ಕೆ ಮೂಲ ಕಾರಣ ನಾಗರೀಕತೆ ಬೆಳವಣಿಗೆಗೆ ಮೂಲಾಧಾರವಾದ ನಂದಿ ಕೃಷಿಯನ್ನು ಮರೆತು ತೈಲ ಆಧಾರಿತ ರಾಸಾಯನಿಕ ಹಾಗೂ ಯಾಂತ್ರಿಕ ಕೃಷಿಗೆ ಮಹತ್ವ ನೀಡುತ್ತಿರುವುದಾಗಿದೆ. ಕಳೆದ 9 ಶತಮಾನಗಳಲ್ಲಿ ಅದೆಷ್ಟೋ ಪರಕೀಯರ ದಾಳಿಗಳಾದರೂ ಸಹ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕೀರ್ತಿ ಮಠ-ಮಂದಿರಗಳ ಪೂಜ್ಯರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಅನೇಕ ಪೂಜ್ಯರ ಸಮಾಧಿಯ ಜೊತೆಗೆ ನಂದಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದನ್ನು ಕಾಣುತ್ತೇವೆ. ನಂದಿ ಕೃಷಿ ಸಂಸ್ಕೃತಿ ವಿನಾಶದ ಅಂಚಿನಲ್ಲಿರುವ ಸಂದರ್ಭದಲ್ಲಿ ನಾವಿಂದು ಮಠ ಮಂದಿರಗಳಲ್ಲಿರುವ ನಂದಿ ಆಧಾರಿತವಾಗಿ ಒಗ್ಗೂಡಿ ಇಂದಿನ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ. ಮಠ ಮಂದಿರಗಳಲ್ಲಿರುವ ನಂದಿ ಮೂರ್ತಿಗಳಿಗೆ ಭಕ್ತಿಯಿಂದ ಕೈ ಮುಗಿದು ವಾಸ್ತವದಲ್ಲಿ ನಂದಿ ಸಂಪತ್ತನ್ನು ಉಳಿಸಲು ಬಯಸುವ ರಾಜಕೀಯ ನಾಯಕರಿಗೆ ಮತ ನೀಡದಿದ್ದರೆ ಮುಂದೆ ಯಾವ ದೇವರೂ ಕೂಡ ಕಾಪಾಡಲಾರ ಎಂಬ ಸತ್ಯ ಸಂಗತಿಯ ಕುರಿತು ಜನರಿಗೆ ಅರಿವು ಮೂಡಿಸಬೇಕಾಗಿದೆ. ಜಗತ್ತಿನಲ್ಲಿ ಅತೀ ಹೆಚ್ಚು ನಂದಿ ಭಕ್ತರನ್ನು ಹೊಂದಿದ ದೇಶ ಭಾರತವಾಗಿದೆ. ನಂದಿ ಮತಗಳನ್ನು ಪೂಜ್ಯರ ಮೂಲಕ ಕ್ರೋಢೀಕರಿಸಿ ರೈತರಿಗೆ ಪೂರಕ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡಿದರೆ ಮಾತ್ರ ಭಾರತ ಹಾಗೂ ಇತರ ಎಲ್ಲ ರಾಷ್ಟ್ರಗಳ ರೈತರಿಗೆ ಒಳ್ಳೆಯ ಭವಿಷ್ಯವಿದೆ. ಹಿಂದು, ವೀರಶೈವ, ಲಿಂಗಾಯತ ಹಾಗೂ ವಕ್ಕಲಿಗ ಎಂಬ ಶಬ್ದಗಳು ನಂದಿ ಕೃಷಿಕರ ಶ್ರಮದಿಂದ ಬೆಳೆದ ನಾಗರಿಕ ಸಮಾಜದಿಂದ ಜನ್ಮ ತಾಳಿವೆ. ಯಾವ ಶಕ್ತಿಯಿಂದ ವಿವಿಧ ಧಾರ್ಮಿಕ ಶಬ್ದಗಳು ಜನ್ಮ ತಾಳಿವೆಯೋ ಆ ಶಕ್ತಿಯನ್ನು ಉಳಿಸಲು ಪ್ರಯತ್ನಿಸದೆ ರಾಜಕೀಯ ಅಧಿಕಾರ ಅನುಭವಿಸುತ್ತಿರುವ ನಾಯಕರ ಅಂತ್ಯ ಕಾಲ ತೈಲ ಕೊರತೆಯಾದಂತೆ ಹತ್ತಿರವಾಗುವುದು. ಹಾಗಾಗಿ, ದೂರದೃಷ್ಟಿಕೋನದಿಂದ ಚಿಂತನೆ ಮಾಡಿ ಹೆಜ್ಜೆ ಇಡುವ ನಾಯಕರಿಗೆ ಮಾತ್ರ ಇನ್ನು ಮುಂದೆ ಒಳ್ಳೆಯ ಭವಿಷ್ಯವಿದೆ.
ಗುರಿ: ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆ ಜಾರಿಗೆ ತಂದು ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಾಗುವಂತೆ ಮಾಡುವುದು.
ಗುರಿ ತಲುಪುವ ಪ್ರಕ್ರಿಯೆ:
ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಜರುಗಿದ 108 ಗ್ರಾಮಗಳ ಜೋಡೆತ್ತಿನ ಕೃಷಿಕರ ಸಮಾವೇಶದ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಹಕ್ಕೊತ್ತಾಯ ಪತ್ರದ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವಂತೆ ಮಾಡುವುದು:
1. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ರೈತರು ಎತ್ತುಗಳನ್ನು ಮಾರಾಟ ಮಾಡದೆ ತಮ್ಮ ಮನೆಯಲ್ಲಿ ಉಳಿಸಿಕೊಳ್ಳುವಂತೆ ಮಾಡಬೇಕು.
2. ರಾಜ್ಯ ಸರ್ಕಾರಗಳು ರಾಜ್ಯದ 10 ಪ್ರತಿಶತ ಬಜೆಟ್ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆಹಾರ, ನಂದಿ ಗೊಬ್ಬರ ಹಾಗೂ ನಂದಿ ಆರೋಗ್ಯ ವರ್ಧಕಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾನೂನು ಜಾರಿಗೆ ತರಬೇಕು.
ಸಂಪರ್ಕಿಸಿ:missionsavesoil.com
..........................................
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನದ ಅಡಿಯಲ್ಲಿ 2026ರ ಬಸವ ಜಯಂತಿ ಅಂಗವಾಗಿ ಬಸವಕಲ್ಯಾಣದ ಸುತ್ತಲಿನ 11 ಗ್ರಾಮಗಳ ಜೋಡೆತ್ತಿನ ಕೃಷಿಕರ ಪಾದಪೂಜೆ ಕೈಗೊಂಡ ನಂತರ ಬಸವಕಲ್ಯಾಣದ ಪರುಷ ಕಟ್ಟೆಯಿಂದ ಕೂಡಲ ಸಂಗಮದ ವರೆಗೆ 13 ದಿನಗಳ ಕಾಲ ಏಕಾಂಗಿಯಾಗಿ ಪಾದಯಾತ್ರೆ ಕೈಗೊಂಡ ಅನುಭವ ಹಾಗೂ ವಿಜಯಪುರದಿಂದ ಬೆಂಗಳೂರು ವರೆಗೆ ಏಕಾಂಗಿಯಾಗಿ 560 ಕಿಲೋಮೀಟರ್ ಪಾದಯಾತ್ರೆ ಕೈಗೊಂಡ ಅನುಭವದ ಆಧಾರದ ಮೇಲೆ ವಿಷಯವನ್ನು ಪ್ರಸ್ತಾಪಿಸಲಾಗಿದೆ.
ಬಸವರಾಜ ಎನ್. ಬಿರಾದಾರ
ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ

No comments:
Post a Comment