Saturday, June 20, 2026

.




ಪೂಜ್ಯರು ನಂದಿ ವಿಜ್ಞಾನ ಅರಿತು ಒಂದಾದರೆ ವಿಶ್ವಕ್ಕೆ ಒಳಿತೆಂದು ಕೂಡಲ ಸಂಗಮನಾಥನ ಮುಂದಿರುವ ಜೋಡಿ ನಂದಿಗಳು ಕೂಗಿ ಹೇಳುತ್ತಿವೆಯೇ?

ಭೂಮಿಯು ಇಂದು ನಿಧಾನ ಹಾಗೂ ತೀವ್ರಗತಿ ಎಂಬ ಎರಡು ರೀತಿಯಿಂದ ವಿಷವಾಗುತ್ತಿದೆ. ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳ ಬಳಕೆ ಹೆಚ್ಚಾಗಿ ನಂದಿ ಕೃಷಿ ಸಂಸ್ಕೃತಿ ನಾಶವಾದಂತೆ ವಿಶ್ವದ ಬಹು ಜನರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ತುತ್ತಾಗುವುದನ್ನು ವಿಶ್ವ ಸಂಸ್ಥೆಯ ವರದಿ ತಿಳಿಸುತ್ತಿರುವುದು ಭೂಮಿಯು ನಿಧಾನ ಗತಿಯಲ್ಲಿ ವಿಷವಾಗುತ್ತಿರುವುದರ ಸೂಚಕವಾಗಿದೆ. ಯುದ್ಧಗಳು ಹಾಗೂ ಪ್ರಕೃತಿ ವಿಕೋಪಗಳಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಜನರಲ್ಲಿ ಆಕ್ರೋಶ ಹೆಚ್ಚಾಗಿ ವ್ಯವಸ್ಥೆಯ ಮೇಲಿನ ಹಿಡಿತ ತಪ್ಪುವ ಸಮಯವು ತೀವ್ರಗತಿಯ ವಿಷವಾಗಿದೆ. ಈ ಸಂದರ್ಭದಲ್ಲಿ ಭೂಮಿ ವಿಷಪೂರಿತ ಆಗುತ್ತಿರುವುದನ್ನು ತಡೆಯುವ ಶಕ್ತಿ ವೀರಶೈವ ಲಿಂಗಾಯತ ಪೂಜ್ಯರಿಗೆ ಮಾತ್ರವಿದೆ. ಏಕೆಂದರೆ, ಇಂದು ಭೂಮಿಯ ಮೇಲೆ ನಂದಿ ಕೃಷಿ ಸಂಸ್ಕೃತಿಗೆ ಪೂರಕ ಆಚರಣೆಗಳನ್ನು ಉಳಿಸಿ ಬೆಳೆಸಿಕೊಂಡು ಬಂದ ಜನರಲ್ಲಿ ಮೊದಲ ಸ್ಥಾನದಲ್ಲಿ ಇರುವವರು ವೀರಶೈವ ಲಿಂಗಾಯತರು ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ‌ ತಿಳಿಯುತ್ತದೆ.

ಶಿವಲಿಂಗದ ಮುಂದೆ, ಮಠಗಳಲ್ಲಿ ಹಾಗೂ ಬಹು ಜನರ ಮನೆಯ ಜಗುಲಿಯ ಮೇಲೆ‌ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜೆ ಮಾಡುವುದು ನಂದಿ ಕೃಷಿ ಸಂಸ್ಕೃತಿಯ ಮೇಲೆ ನಾಗರೀಕತೆಯ ಭವಿಷ್ಯ ನಿಂತಿದೆ ಎಂಬುದರ ಸೂಚಕವಾಗಿವೆ. ಈ ವೈಜ್ಞಾನಿಕ ಸತ್ಯವನ್ನು ಬಹು ಜನರು ಅರಿತು ಹೆಜ್ಜೆ ಇಟ್ಟರೆ ಮಾತ್ರ ಮುಂದೆ ಎಲ್ಲರಿಗೂ ಒಳ್ಳೆಯ ಭವಿಷ್ಯವಿದೆ. ನಂದಿ ಕೃಷಿಕರ ಶ್ರಮದಿಂದ ಬೆಳೆದ ನಾಗರೀಕ ಸಮಾಜದಿಂದ ಶಿವಲಿಂಗ ಹಾಗೂ ಇಷ್ಟಲಿಂಗ ಪೂಜಾ ಸಂಪ್ರದಾಯಗಳು ಜನ್ಮ ತಾಳಿವೆ ಎಂಬುದು ಇತಿಹಾಸ ಹಾಗೂ ಆಧುನಿಕ ವಿಜ್ಞಾನದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಶಿವಾಲಯಗಳು ಪರಕೀಯರಿಂದ ಧ್ವಂಸವಾದಾಗ ಜನರು ಚದುರಿ ಹೋದರೂ ಕೂಡ ನಂದಿ ಕೃಷಿ ಸಂಸ್ಕೃತಿ ಉಳಿದು ಬೆಳೆಯಬೇಕು ಎಂಬ ದೂರದೃಷ್ಟಿಕೋನದಿಂದ ವಿಶ್ವಗುರು ಬಸವಣ್ಣನವರು ಇಷ್ಟಲಿಂಗ ಪೂಜಾ ಸಂಪ್ರದಾಯ ಮುನ್ನೆಲೆಗೆ ತಂದಿರುವುದು ಸಾರ್ಥಕವಾಗಿದೆ.

ಹಲವಾರು ಶತಮಾನಗಳಿಂದ ನಮ್ಮ ಪೂಜ್ಯರು ಉಳಿಸಿ ಬೆಳೆಸಿಕೊಂಡು ಬಂದಿರುವ ನಂದಿ ಕೃಷಿ ಸಂಸ್ಕೃತಿ ಇಂದು ವಿನಾಶದ ಅಂಚಿಗೆ ಬಂದು ತಲುಪಿರುವುದು ಭವಿಷ್ಯದ ಕರಾಳ ದಿನಗಳ ಮುನ್ಸೂಚನೆಯಾಗಿದೆ. ನಂದಿ ಕೃಷಿ ಸಂಸ್ಕೃತಿ ನಾಶವಾದಂತೆ ಪ್ರತಿ ಗ್ರಾಮಗಳಲ್ಲಿ ಔಷಧಿಗಳಿಲ್ಲದ ಮನೆಗಳನ್ನು ಹುಡುಕುವುದು ಅಸಾಧ್ಯ ಎಂಬ ಹಂತಕ್ಕೆ ಬಂದು ತಲುಪಿದ್ದೇವೆ. ಈ ಸತ್ಯದ ಅರಿವು ಗ್ರಾಮಗಳ ಬಹು ಜನರಿಗೆ ಆಗುತ್ತಿದೆ. ಕೊನೆಗೆ ಲಿಂಗ ಪೂಜೆಗೆ ಅವಶ್ಯವಿರುವ ಶುದ್ಧವಾದ ನೀರು ದೊರೆಯುವುದು ಕೂಡ ಕಷ್ಟವೆಂಬ ಹಂತಕ್ಕೆ ತಲುಪಿದ್ದೇವೆ. ಎತ್ತಿನಿಂದ ಉಳುಮೆ ಮಾಡುವುದು ಕಡಿಮೆಯಾದಂತೆ ಭೂಮಿ ಬಂಡೆಯಂತಾಗಿ ನೀರು ಇಂಗುವಿಕೆ ಪ್ರಮಾಣ ಕಡಿಮೆಯಾಗಿ ಹಳ್ಳಗಳು ಬತ್ತುತ್ತಾ ಚರಂಡಿ ರೂಪ ತಾಳುತ್ತಿರುವುದನ್ನು ಕಾಣುತ್ತಿದ್ದೇವೆ. ನಂದಿ ಕೃಷಿ ಮರೆತು ಅಣೆಕಟ್ಟುಗಳಿಂದ ನೀರು ನಿಲ್ಲಿಸಲು ಆದ್ಯತೆ ನೀಡಿದಂತೆ ಕರ್ನಾಟಕ ರಾಜ್ಯದ ಪ್ರಮುಖ 12 ನದಿಗಳ ನೀರು ನೇರವಾಗಿ ಕುಡಿಯಲು ಯೋಗ್ಯವಲ್ಲದ ಸ್ಥಿತಿಗೆ ಬಂದು ತಲುಪಿವೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ನೀಡಿದೆ. ಇದೇ ನದಿಗಳ ನೀರನ್ನು ಅವಲಂಬಿಸಿ ಜೀವನ ಸಾಗಿಸುತ್ತಿರುವ ಅನೇಕ ನಗರ ಹಾಗೂ ಗ್ರಾಮಗಳ ಜನರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಒಮ್ಮೆ ಯೋಚಿಸಿ ಹೆಜ್ಜೆ ಇಡಬೇಕಾಗಿದೆ.

ನಂದಿ ಕೃಷಿ ನಾಶವಾದಂತೆ ಕುಡಿಯುವ ನೀರು ಅಶುದ್ಧವಾಗಿ ಕೊನೆಗೆ ಅತ್ಯಂತ ಪರಿಶುದ್ಧ ವಸ್ತುಗಳ ಸಂಗಮದ ಸಂಕೇತವಾದ ಲಿಂಗ ಪೂಜೆಗೆ ಮೊದಲ ಅವಶ್ಯಕತೆಯಾದ ಶುದ್ಧ ನೀರು ಎಲ್ಲ ಲಿಂಗ ಪೂಜಕರಿಗೆ ದೊರೆಯದ ಪರಿಸ್ಥಿತಿ‌ ನಿರ್ಮಾಣವಾಗುತ್ತಿದೆ. ನಂದಿ ಕೃಷಿಕರ ಶ್ರಮಕ್ಕೆ ಬೆಲೆ ನೀಡುವ ವ್ಯವಸ್ಥೆಯನ್ನು ಉಳಿಸಿ ಬೆಳೆಸಿಕೊಂಡು ಹೋದರೆ ಮಾತ್ರ ಶಿವಲಿಂಗ-ಇಷ್ಟಲಿಂಗ ಪೂಜೆಗೆ ಬೇಕಾದ ವಸ್ತುಗಳು ಪರಿಶುದ್ಧ ರೂಪದಲ್ಲಿ ಯಥೇಚ್ಛವಾಗಿ ಎಲ್ಲ ಕಡೆ ದೊರೆಯುತ್ತವೆ ಎಂಬುದು ಇತಿಹಾಸ ಹಾಗೂ ಇಂದಿನ ಆಧುನಿಕ ವಿಜ್ಞಾನದಿಂದ ತಿಳಿಯುತ್ತಿದೆ. 

ಕಳೆದ ಕೆಲವು ದಶಕಗಳಿಂದ ನಂದಿ ಕೃಷಿಕರ ಶ್ರಮವನ್ನು ಕಡೆಗಣಿಸಿ ತೈಲ ಆಧಾರಿತ ಯಂತ್ರ ಹಾಗೂ ರಾಸಾಯನಿಕಗಳಿಗೆ ಮಹತ್ವ ನೀಡುತ್ತಾ ಬಂದ ಕಾರಣ ಕರ್ನಾಟಕ ರಾಜ್ಯದ 60 ಪ್ರತಿಶತ ಭೂಮಿ ಅಸಹಜ ಸ್ಥಿತಿಗೆ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯನವರು ಹೇಳಿದ್ದಾರೆ. ನಂದಿ ಕೃಷಿಯ ಮಹತ್ವವನ್ನು ಎತ್ತಿ ಹಿಡಿಯುವುದರಲ್ಲಿ ಇಂದಿನ ಕೃಷಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ ಎಂಬುದು ಅಲ್ಲಿರುವ ಶಿಕ್ಷಣ ಪದ್ಧತಿಯಿಂದ ತಿಳಿಯುತ್ತಿದೆ. ಕಳೆದ 20 ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯಗಳು ನಂದಿ ಕೃಷಿಯನ್ನು ಉಳಿಸಲು ಯಾವ ಕೊಡುಗೆ ನೀಡಿವೆ? ಎಂಬ ಪ್ರಶ್ನೆಗೆ ಉತ್ತರವನ್ನು ಪಡೆದು ಕೃಷಿ ವಿಶ್ವವಿ

ದ್ಯಾಲಯಗಳನ್ನು ಸರಿ ದಾರಿಗೆ ತರುವ ಹಕ್ಕು ವೀರಶೈವ ಲಿಂಗಾಯತ ಮಠಾಧೀಶರಿಗಿದೆ. ಏಕೆಂದರೆ, ಕಳೆದ 9 ಶತಮಾನಗಳಲ್ಲಿ ಪರಕೀಯರಿಂದ‌ ಅನೇಕ ದಾಳಿಗಳಾದರೂ ಕೂಡ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದ ಕೀರ್ತಿ ವೀರಶೈವ ಲಿಂಗಾಯತ ಮಠಾಧೀಶರಿಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಎಲ್ಲ ಮಠಗಳಲ್ಲಿ ನಂದಿ ಮೂರ್ತಿಗಳನ್ನು ಸ್ಥಾಪಿಸಿ ಪೂಜಿಸುವುದನ್ನು ಕಾಣುತ್ತೇವೆ.

ಶಿವಲಿಂಗ-ಇಷ್ಟಲಿಂಗ ಪೂಜೆಗೆ ಬೇಕಾದ ಶುದ್ಧವಾದ ನೀರು ಕೂಡ ದೊರೆಯದ ಹಂತಕ್ಕೆ ತಲುಪಿರುವ ಸಂದರ್ಭದಲ್ಲಿ ಹಲವು ಶತಮಾನಗಳಿಂದ ನಂದಿ ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಮಠಗಳ ಪೂಜ್ಯರು ಒಂದಾಗಿ ವೈಜ್ಞಾನಿಕವಾಗಿ ಚಿಂತನೆ ಮಾಡಿ ಹೆಜ್ಜೆ ಇಡಬೇಕಾದ ಅವಶ್ಯಕತೆ ಬಂದೊದಗಿದೆ. ನಂದಿ ಕೃಷಿ ಸಂಸ್ಕೃತಿ ಮಹತ್ವವನ್ನು ಅರಿಯದೆ ಹೆಜ್ಜೆ ಇಡುತ್ತಿರುವ ಕೃಷಿ ವಿಶ್ವವಿದ್ಯಾಲಯಗಳಿಂದ ಸಂವಿಧಾನದ ಮೂಲ ಬೇರುಗಳಾದ ನಂದಿ ಕೃಷಿಕರು ಅಳಿವಿನ ಅಂಚಿಗೆ ಬಂದು ತಲುಪಲು ಕಾರಣವಾಗುತ್ತಿದೆ. 

ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಜವಾಬ್ದಾರಿಯನ್ನು ಅರಿಯದೆ ನಡೆಯುತ್ತಿರುವ  ಕಾರಣ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೂ ಕೂಡ ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ಕಾನೂನು ಹಾಗೂ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ನಂದಿ ಕೃಷಿಕರ ಮಹತ್ವದ ಕುರಿತು ಅರಿವು ಮೂಡಿಸುವುದರಲ್ಲಿ ಇಂದಿನ ವಿದ್ಯಾ ಸಂಸ್ಥೆಗಳು ವಿಫಲವಾದ ಕಾರಣ ಜಗತ್ತಿನಲ್ಲಿ ಭಾರತವು ಮಾಂಸ ಉತ್ಪಾದನೆಯಲ್ಲಿ ಎರಡನೇ ಸ್ಥಾನಕ್ಕೆ ಬಂದು ತಲುಪಿದೆ. ನಾಗರೀಕತೆಯನ್ನು ಉಳಿಸಿ‌ ಬೆಳೆಸಿ ಕೊನೆಗೆ ಭಾರತದ ಸಂವಿಧಾನ ನಿರ್ಮಾಣಕ್ಕೆ ಶ್ರೇಷ್ಠ ಕೊಡುಗೆ ನೀಡಿದ ನಂದಿ ಕೃಷಿಕರ ಶ್ರಮಕ್ಕೆ ತಕ್ಕ ಬೆಲೆ ನೀಡುವ ವ್ಯವಸ್ಥೆ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಮರಳಿ ವೀರಶೈವ ಲಿಂಗಾಯತ ಮಠಾಧೀಶರು ಹೊತ್ತರೆ ಮಾತ್ರ ಭಾರತ ದೇಶಕ್ಕೆ ಒಳ್ಳೆಯ ಭವಿಷ್ಯವಿದೆ‌ ಎಂಬುದನ್ನು ಎಲ್ಲ ಮಠ-ಮಂದಿರಗಳಲ್ಲಿರುವ ನಂದಿ ಮೂರ್ತಿಗಳು ಕೂಗಿ ಹೇಳುತ್ತಿವೆ.

ನಂದಿ ಕೃಷಿ ಪುನಶ್ಚೇತನಕ್ಕಾಗಿ ಪೂಜ್ಯರಿಂದ ನಂದಿ ಹಕ್ಕೊತ್ತಾಯ 

ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಪ್ರಜ್ಞಾವಂತ ಕೃಷಿ ಪದವೀಧರರು ಪ್ರಾರಂಭಿಸಿದ ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆಗೆ ರಾಜ್ಯದ ಅನೇಕ ಪೂಜ್ಯರು ಆಶಿರ್ವಾದ ಮಾಡುತ್ತಾ ಬಂದಿರುವುದರಿಂದ ಕಳೆದ 3 ವರ್ಷಗಳಿಂದ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲು ಸಾಧ್ಯವಾಗಿದೆ. ಮುಂದುವರೆದು, 108 ಗ್ರಾಮಗಳ ಜೋಡೆತ್ತಿನ ಕೃಷಿಕರ ಸಮಾವೇಶವನ್ನು‌ ಪೂಜ್ಯರ ಸಾನಿಧ್ಯದಲ್ಲಿ ಆಯೋಜಿಸಿ ಈ ಕೆಳಗಿನ ಬೇಡಿಕೆಗಳ ಹಕ್ಕೊತ್ತಾಯ ಪತ್ರವನ್ನು 2026ರ ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಗಿದೆ. 

1. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000 ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತರಬೇಕು.

2. ರಾಜ್ಯದ 10 ಪ್ರತಿಶತ ಬಜೆಟ್ ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ವಿದ್ಯುತ್, ನಂದಿ ಗ್ಯಾಸ್, ನಂದಿ ಅಡುಗೆ ಎಣ್ಣೆ, ನಂದಿ ಆಹಾರ, ನಂದಿ ಗೊಬ್ಬರ ಹಾಗೂ ನಂದಿ ಆರೋಗ್ಯ ವರ್ಧಕಗಳ ಉತ್ಪಾದನೆಗೆ ಉತ್ತೇಜನ ನೀಡುವ ಕಾನೂನು ಜಾರಿಗೆ ತರಬೇಕು.

ಮುಂಬರುವ ರಾಜ್ಯ ಬಜೆಟ್ ನ 10% (ಸುಮಾರು 50 ಸಾವಿರ ಕೋಟಿ) ಹಣವನ್ನು ನಂದಿ ಕೃಷಿ ಪುನಶ್ಚೇತನಕ್ಕಾಗಿ ಮೀಸಲಿಟ್ಟು ನಂದಿ ಶಕ್ತಿಯಿಂದ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸಬಹುದಾದ ಹಾಗೂ ಪಂಚ ಮಹಾಭೂತಗಳನ್ನು ರಕ್ಷಿಸಬಹುದಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂಬ ಹಕ್ಕೊತ್ತಾಯ ರಾಜ್ಯದ ಎಲ್ಲ ಪೂಜ್ಯರಿಂದ ಆಗಬೇಕಾಗಿದೆ. ಅಂದಾಗ ಮಾತ್ರ ಮರಳಿ ರೈತರು ಹಾಗೂ ಮಠಗಳ ನಡುವಿನ ಒಳ್ಳೆಯ ಭಾಂದವ್ಯ ವೃದ್ಧಿಯಾಗಿ ಸಂವಿಧಾನ ಭದ್ರವಾಗಿರಲು ಸಾಧ್ಯವಿದೆ.

ಸರ್ವ ಧರ್ಮಗಳ ಜನರ ಒಳಿತಿಗಾಗಿ ಪೂಜ್ಯರ 'ನಂದಿ‌ ನಿರ್ಧಾರ'  

ನಂದಿ ಕೃಷಿ ಪುನಶ್ಚೇತನಕ್ಕೆ ಪೂರಕ ಕಾನೂನು ಹಾಗೂ ಯೋಜನೆ ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ಪಕ್ಷಾತೀತವಾಗಿ ನಂಬಿದ ದೇವರ ಸಾಕ್ಷಿಯಾಗಿ ‌ಮತ ನೀಡಿದರೆ ಮಾತ್ರ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬುದರ ಕುರಿತು ಭಕ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲ ಮಠಗಳ ಮೂಲಕ ಹಮ್ಮಿಕೊಳ್ಳುವ ನಿರ್ಧಾರವನ್ನು ಎಲ್ಲ ಪೂಜ್ಯರು ಒಂದುಗೂಡಿ ತೆಗೆದುಕೊಳ್ಳುವ ನಿರ್ಧಾರವೇ 'ನಂದಿ ನಿರ್ಧಾರ' ವಾಗಿದೆ.

                                        

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: missionsavesoil.com

.............................................

ಬಸವರಾಜ ಎನ್. ಬಿರಾದಾರ

ನಂದಿ ಕೂಗು ಅಭಿಯಾನ ಹಾಗೂ ನಂದಿ ಸೇನೆ ಸಂಘಟನೆ, 9449303880

 

No comments:

Post a Comment

ಗುರು ವಿರಕ್ತ ಮಠಗಳ ಪೂಜ್ಯರು ಹಾಗೂ ಭಕ್ತರ ನಂದಿ ಮತ ಜಾಗೃತಿಯ ಮೇಲೆ ವಿಶ್ವದ ಭವಿಷ್ಯ ನಿಂತಿದೆಯೇ?

  ಇಂದಿನಿಂದ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆ ಸಂಪೂರ್ಣವಾಗಿ ಭಾರತದಲ್ಲಿ ಸ್ಥಗಿತವಾದರೆ ಯಾವ ಗ್ರಾಮಗಳಲ್ಲಿ ನಂದಿ ಅಥವಾ ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಇರುವರೋ ಆ ಗ್ರಾಮ...