ಅತ್ಯಂತ ಕ್ರಿಯಾಶೀಲ ಯುವ ಸನ್ಯಾಸಿಗಳಾದ ಬಸವನ ಬಾಗೇವಾಡಿಯ ವಿರಕ್ತ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪರಮ ಭಕ್ತರು. ಎರಡು ವರ್ಷಗಳ ಹಿಂದೆ ಸಿದ್ಧೇಶ್ವರ ಶ್ರೀಗಳ ಆಶಿರ್ವಾದದಿಂದ ಪ್ರಾರಂಭವಾದ ಎತ್ತಿನ ರೈತರಿಂದ 'ಬಸವ ಸಂಸ್ಕೃತಿ' ಉಳಿಸುವ 'ನಂದಿ ಕೂಗು' ಅಭಿಯಾನಕ್ಕೆ ಸಿದ್ಧಲಿಂಗ ಶ್ರೀಗಳು ನೀಡಿದ ಕೊಡುಗೆ ಅಪಾರವಾಗಿದೆ. ಬಸವನ ಬಾಗೇವಾಡಿಯ ಇತಿಹಾಸದಲ್ಲಿ ಮೊದಲ ಬಾರಿಗೆ 320 ಎತ್ತಿನ ಬಂಡಿಗಳನ್ನು ಒಂದು ಕಡೆ ಸೇರಿಸಿ ಸಮಾವೇಶ ಮಾಡಿದ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ.
ಬಸವ ಜಯಂತಿಯ ಅಂಗವಾಗಿ "ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನ" ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ ಶ್ರೀಗಳು ಇತರರಿಗೆ ಮಾದರಿಯಾಗಿ ನಿಂತಿದ್ದಾರೆ. ಜೋಡೆತ್ತಿನ ಕೃಷಿಕರಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಸವ ತತ್ವ ಉಳಿಸಬೇಕೆಂಬ ನಂದಿ ಕೂಗು ಅಭಿಯಾನದ ಉದ್ದೇಶಕ್ಕೆ ಸದಾ ಬೆನ್ನೆಲುಬಾಗಿ ಶ್ರೀಗಳು ನಿಂತಿದ್ದಾರೆ. ಸಿದ್ಧಲಿಂಗ ಶ್ರೀಗಳು ಎತ್ತಿನ ರೈತರಿಂದ ಬಸವ ತತ್ವ ಉಳಿಸುವ ಅನೇಕ ಕಾರ್ಯಕ್ರಮಗಳ ಸಾನಿಧ್ಯ ವಹಿಸಿ ಯಶಸ್ವಿಗೊಳಿಸಿದ್ದಾರೆ. (ಸಂಪರ್ಕಿಸಿ: https://www.missionsavesoil.com/ನದ-ಸಮವಶ-ಹಗ-ಸಮಮಳನಗಳ )
ಇತ್ತೀಚೆಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ವತಿಯಿಂದ ಒಂದು ತಿಂಗಳ ವರೆಗೆ ಜರುಗಿದ ಬಸವ ಸಂಸ್ಕೃತಿ ಅಭಿಯಾನದ ಪ್ರಾರಂಭೋತ್ಸವವು ಬಸವನ ಬಾಗೇವಾಡಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿತು. ಈ ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಜನರು ಆಗಮಿಸಬೇಕಾದರೆ ಸಿದ್ಧಲಿಂಗ ಶ್ರೀಗಳ ಶ್ರಮ ಅಪಾರವಾಗಿದೆ. ಬಸವನ ಬಾಗೇವಾಡಿಯ ವಿವಿಧ ಕಾಲೋನಿಗಳಿಗೆ ದಿನಾಲು ಭಜನೆ ಮಾಡುತ್ತಾ ಸಾಗಿ ಜನರಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಕೋರಿರುವುದು ಪೂಜ್ಯರಿಗೆ ಸಮಾಜದ ಮೇಲಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಪ್ರತಿಯೊಂದು ಸಮಾಜಮುಖಿ ಕಾರ್ಯದ ಮುಂದಾಳತ್ವ ವಹಿಸುವ ಶ್ರೀಗಳು ದೊಡ್ಡದಾದ ಯುವ ಭಕ್ತ ಸಮೂಹವನ್ನು ಹೊಂದಿದ್ದಾರೆ ಹಾಗೂ ಪಕ್ಷಾತೀತವಾಗಿ ಎಲ್ಲರೂ ಒಪ್ಪುವಂತೆ ಕೆಲಸ ಮಾಡುತ್ತಾ ಬಹು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಬಸವ ಸಂಸ್ಕೃತಿ ಅಭಿಯಾನದ ನಂತರ ಸೃಷ್ಟಿಯಾಗುತ್ತಿರುವ ಕಹಿ ಘಟನೆಗಳು ಇಂತಹ ಪೂಜ್ಯರನ್ನು ಧರ್ಮ ಸಂಕಟಕ್ಕೆ ಒಳಗಾಗುವಂತೆ ಮಾಡಿವೆ. ಇಂತಹ ಸಾತ್ವಿಕ ಶ್ರೀಗಳ ಭಕ್ತ ಸಮೂಹ ಕೂಡ ಧರ್ಮ ಸಂಕಟಕ್ಕೆ ಒಳಗಾಗಿದೆ. ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪರಮ ಭಕ್ತರಾದ ಕನೇರಿ ಶ್ರೀಗಳು ರೈತರಿಗೆ ಗೋ ಆಧಾರಿತ ಕೃಷಿ ಜ್ಞಾನ ಹಂಚುವ ಮೂಲಕ ಪ್ರಾಯೋಗಿಕ ಬಸವ ತತ್ವಜ್ಞಾನಿಯಾದವರು. (ಹೆಚ್ಚಿನ ವಿಷಯಕ್ಕಾಗಿ ಸಂಪರ್ಕಿಸಿ: https://nandi-koogu.blogspot.com/2025/10/blog-post.html ) ಇಂತಹ ಕನೇರಿ ಶ್ರೀಗಳ ವಿರುದ್ಧ ಇನ್ನೋರ್ವ ಸಿದ್ಧೇಶ್ವರ ಶ್ರೀಗಳ ಅನುಯಾಯಿಗಳಾದ ಸಿದ್ಧಲಿಂಗ ಶ್ರೀಗಳು ಪ್ರತಿಭಟನೆ ಮಾಡುವ ಸಂದರ್ಭ ಸೃಷ್ಟಿಯಾಗಿರುವುದು ವಿಪರ್ಯಾಸವಾಗಿದೆ. ಇಬ್ಬರೂ ಶ್ರೀಗಳು ಮಾಡುತ್ತಿರುವ ಸಮಾಜಮುಖಿ ಕಾರ್ಯವನ್ನು ಕಂಡು ಹಿಂಬಾಲಿಸುತ್ತಿರುವ ಅನೇಕ ಶಿಷ್ಯರು ಇಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿದ್ದಾರೆ.
ಬಸವನ ಬಾಗೇವಾಡಿಯ ಸಿದ್ಧಲಿಂಗ ಶ್ರೀಗಳು ಧರ್ಮ ಸಂಕಟಕ್ಕೆ ಒಳಗಾದಂತೆ ಇಂದು ಅನೇಕ ಶ್ರೀಗಳು ಧರ್ಮ ಸಂಕಟಕ್ಕೆ ಒಳಗಾಗಿದ್ದಾರೆ. ವಾಸ್ತವಿಕ ಸಂಗತಿಗಳ ಅರಿವಿನ ಕೊರೆತೆಯಿಂದ ಗೋ, ನಂದಿ ಹಾಗೂ ಎತ್ತುಗಳ ಪೂಜೆಯನ್ನು ತಿರಸ್ಕರಿಸುವ ಮನಸ್ಥಿತಿ ಇರುವವರು ರಾಜ್ಯ ಮಟ್ಟದಲ್ಲಿ ಬಸವ ಸಂಸ್ಕೃತಿಗೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಅನೇಕ ಪೂಜ್ಯರು ಧರ್ಮ ಸಂಕಟಕ್ಕೆ ಈಡಾಗುವಂತೆ ಮಾಡಿದೆ. ಇದು ಹೀಗೆಯೇ ಮುಂದುವರೆದರೆ ಅನೇಕ ಪೂಜ್ಯರ ಭವಿಷ್ಯ
ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿಯಾದ ಡಾ ಎಸ್ ಎಮ್ ಜಾಮದಾರ್ ಅವರು ಎತ್ತುಗಳ ಪೂಜೆ ಮಾಡುವುದು ಅಪರಾಧ ಹಾಗೂ ಪೂಜೆ ಮಾಡಿದವರ ಮೇಲೆ ಕ್ರಿಮಿನಲ್ ಕೇಸ್ ಹಾಕಬೇಕು ಎಂದು ಹೇಳುತ್ತಿರುವುದು ಬಸವಣ್ಣನವರು ಪ್ರತಿಪಾದಿಸಿದ ಬಸವ ತತ್ವ ಅಥವಾ ಬಸವ ಸಂಸ್ಕೃತಿಗೆ ವಿರುದ್ಧವಾದ ಹಾಗೂ ಅವೈಜ್ಞಾನಿಕ ವಿಚಾರವಾಗಿದೆ. (ಇವರ ಹೇಳಿಕೆಯ ವಿಡಿಯೋ ಲಿಂಕ್ https://youtu.be/wOTZJnFoKqc?si=mtUDE7on3mMQbX0y ) ನಂದಿ ಕೃಷಿಕರ ಮೂಲಕ ಪಂಚಮಹಾಭೂತಗಳು ಹಾಗೂ ಗ್ರಾಮೀಣ ಕಾಯಕಗಳು ಭದ್ರವಾಗಿ ಇರುವಂತೆ ಮಾಡುವ ವಿಜ್ಞಾನಕ್ಕೆ ಬಸವ ತತ್ವವೆಂದು ಕರೆಯಲಾಗುತ್ತದೆ. ಎತ್ತು ಆಧಾರಿತ ಬಸವ ತತ್ವ ಪ್ರತಿಪಾದಿಸಿ ಬಸವಣ್ಣನವರು ವಿಶ್ವಗುರುವಾಗಿದ್ದಾರೆ. ಹಾಗಾಗಿ, ಡಾ ಎಸ್ ಎಮ್ ಜಾಮದಾರ್ ಅವರಿಗೆ ಸೈದ್ಧಾಂತಿಕವಾಗಿ ಬಸವ ತತ್ವ ಎಂದರೇನು? ಎಂಬುದನ್ನು ನಿರೂಪಿಸಿ ತೋರಿಸಲು ಸವಾಲು ಹಾಕಲಾಗಿದೆ. (ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ: https://nandi-koogu.blogspot.com/2025/10/blog-post_42.html ). ಅನೇಕ ಪೂಜ್ಯರು ಹಾಗೂ ಅವರ ಭಕ್ತರ ದಾರಿ ತಪ್ಪಿಸುವ ಕೆಲಸದಲ್ಲಿ ನಿರತರಾದ ಡಾ ಎಸ್ ಎಮ್ ಜಾಮದಾರ್ ಅವರ ನಡೆಯನ್ನು ಪ್ರಶ್ನಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂದಿ ಶಕ್ತಿ ಅವಲಂಬಿಸಿ ಒಂದಾಗಲು ಪ್ರಯತ್ನಿಸಿದರೆ, ಕುಟುಂಬ, ಗ್ರಾಮ, ರಾಜ್ಯ, ದೇಶ, ಹೀಗೆ ಎಲ್ಲ ಹಂತಗಳಲ್ಲಿ ಜನರನ್ನು ಒಂದೂಗೂಡಿಸಿ ವಾಸ್ತವಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಹಿಂದೆ ನಂದಿ ಶಕ್ತಿಯ ಆಧಾರಿತವಾಗಿ ಬಹು ಜನರು ಒಂದಾಗಿ ಸಮಸ್ಯೆ ಎದುರಿಸಿದ ಇತಿಹಾಸ ಭಾರತದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ missionsavesoil.com
...............................................
ಬಸವರಾಜ ಬಿರಾದಾರ
ನಾಯಕತ್ವ ಸಲಹೆಗಾರ ಹಾಗೂ ನಂದಿ ಕೃಷಿ ತಜ್ಞ, 9449303880 / missionsavesoil.com


No comments:
Post a Comment