Monday, December 8, 2025

ನಂದಿ ಶಕ್ತಿಯಿಂದ ಸ್ವಾವಲಂಬಿ ಭಾರತ ನಿರ್ಮಿಸುವ ಸಾಧ್ಯತೆ ಪರಿಚಯಿಸುವ 'ಜೈ ನಂದಿ ಜೈ ಜಗತ್' ಕಾರ್ಯಕ್ರಮ

 

ಧಾರವಾಡದ ಡಾ. ದಾಕ್ಷಾಯಣಿ ಚಿದಾನಂದ ರಾಮನಗೌಡರ ಎಂಬ ವೈದ್ಯ ದಂಪತಿಗಳು ಅತ್ಯಂತ ಭಕ್ತಿಯಿಂದ ನಿರ್ಮಿಸಿದ ಅಮೃತ ಗೋಧಾಮದಲ್ಲಿ ನಂದಿ ಶಕ್ತಿಯಿಂದ ಸ್ವಾವಲಂಬಿ ಭಾರತ ನಿರ್ಮಾಣದ ಸಾಧ್ಯತೆ ಪರಿಚಯಿಸುವ 'ಜೈ ನಂದಿ ಜೈ ಜಗತ್' ಕಾರ್ಯಕ್ರಮವನ್ನು ದಿನಾಂಕ 07-12-2025 ರಂದು ಶ್ರೀ ಲಿಂಗ ಭೈರವಿ ದೇವಿ ಪೂಜೆಯ ಮೂಲಕ ಪ್ರಾರಂಭಿಸಲಾಯಿತು. ಡಾ.ರಾಮನಗೌಡರ ಕುಟುಂಬದ ಸದಸ್ಯರು ವೃತ್ತಿಯಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿ ಧಾರವಾಡ ಜಿಲ್ಲೆಯಲ್ಲಿ ಸುಪ್ರಸಿದ್ಧಿಯಾಗಿರುವ ವಿಶೇಷ ಕುಟುಂಬ. ಈ ಕುಟುಂಬದ ಸದಸ್ಯರು ಮುಂದಿನ ಜನಾಂಗದ ಆರೋಗ್ಯಕ್ಕೆ ಅವಶ್ಯವಿರುವ ನಂದಿ ಶಕ್ತಿ ಕೇಂದ್ರ ನಿರ್ಮಾಣದ ಚಿಂತನೆಗೆ ಮುಂದಾಗಿರುವುದು ಅವರ ದೂರ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ.  ವೈದ್ಯರಾದ ಡಾ. ದಾಕ್ಷಾಯಣಿ ಅಕ್ಕನವರು ಕಳೆದ 8 ವರ್ಷಗಳಿಂದ ತಮ್ಮ ಜೀವನವನ್ನು ಸಂಪೂರ್ಣವಾಗಿ ನಂದಿ ಸಂತತಿಯ ಸೇವೆಗಾಗಿ ಮುಡಿಪಾಗಿಟ್ಟು 47 ಹಸುಗಳನ್ನು ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಆಧುನಿಕ ಯುಗದ ಶ್ರೇಷ್ಠ ಶರಣೆಯಾಗಿದ್ದಾರೆ. ವೈದ್ಯ ವೃತ್ತಿಯೊಂದಿಗೆ ಪತ್ನಿಯ ಕೆಲಸಕ್ಕೆ ಸರ್ವ ರೀತಿಯಲ್ಲಿ ಬೆಂಬಲವಾಗಿ ನಿಂತಿರುವ ಡಾ. ಚಿದಾನಂದ ಅವರು ಶ್ರೀ ಧನ್ವಂತರಿ ದೇವರು ಮೆಚ್ಚುವಂತಹ ಕೆಲಸದಲ್ಲಿ ನಿರತರಾಗಿದ್ದಾರೆ.   


ದೂರ ದೃಷ್ಟಿಕೋನದಿಂದ ಹೆಜ್ಜೆ ಇಡುತ್ತಾ ಬಂದ ನಾಯಕರು ಮಾತ್ರ ಇತಿಹಾಸ ನಿರ್ಮಿಸಿದ ಉದಾಹರಣೆಗಳಿವೆ. ನಂದಿ ಶಕ್ತಿಯ ಸಮರ್ಥ ಬಳಕೆಯ ಮೂಲಕ ಸುಂದರ ಸಮಾಜ ನಿರ್ಮಿಸಲು ಪ್ರಯತ್ನಿಸಿದ ಭಾರತ ದೇಶದ ರಾಜ ಮಹಾರಾಜರುಗಳು ಇಂದಿಗೂ ಕೂಡ ಬಹು ಜನರಿಗೆ ದೊಡ್ಡ ಸ್ಪೂರ್ತಿಯಾಗಿ ನಿಂತಿದ್ದಾರೆ. 6 ರಿಂದ 12ನೇ ಶತಮಾನದ ಕಾಲಘಟ್ಟದಲ್ಲಿ ಅನೇಕ ರಾಜರುಗಳು ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ಸುಸಂಸ್ಕೃತ ಸಮಾಜ ನಿರ್ಮಿಸಿದ ನಂತರ ಅತ್ಯಂತ ವಿಶೇಷತೆಯಿಂದ ಕೂಡಿದ ಶಿವಾಲಯಗಳನ್ನು ನಿರ್ಮಾಣ ಮಾಡಿದರು. ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಸುಂದರ ಸಮಾಜ ನಿರ್ಮಿಸಿದ ಕುರುಹುಗಳಾಗಿ ಅಂದಿನ ಅನೇಕ ಶಿವಾಲಯಗಳು ಇಂದಿಗೂ ಕೂಡ ಜೀವಂತವಾಗಿ ಉಳಿದಿವೆ. ಅನಾದಿ ಕಾಲದಿಂದ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಂದಿಯು ದಿಕ್ಸೂಚಿಯಾಗಿ ಕೆಲಸ ಮಾಡಿದ ಕಾರಣಕ್ಕಾಗಿ ಪ್ರತಿಯೊಂದು ಶಿವಾಲಯದ ಶಿವಲಿಂಗದ ಮುಂದೆ ನಂದಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಮುಂದಾಳತ್ವದಲ್ಲಿ ಆಧ್ಯಾತ್ಮಿಕ ಕ್ರಾಂತಿ ಘಟಿಸಲು ಮೂಲ ಕಾರಣ ನಂದಿ ಶಕ್ತಿಯ ಸಮರ್ಥ ಬಳಕೆಯಿಂದ ನಿರ್ಮಾಣವಾದ ಸುಸಂಸ್ಕೃತ ಸಮಾಜಿಕ ವ್ಯವಸ್ಥೆಯಾಗಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. "ಜೋಡೆತ್ತಿನ ಕೃಷಿಕನ ಮನೆಯಲ್ಲಿ ಲಿಂಗಾರ್ಚನೆ ಮಾಡಿಕೊಳ್ಳುವ ಗುರುವಿನ ಜೀವನ ಪಾವನವಾಗುವುದು" ಎಂದು ವಿಶ್ವಗುರು ಬಸವಣ್ಣನವರು ಹೇಳಿದ ಮಾತು ಸಮಾಜದ ಆರೋಗ್ಯ ನಂದಿ ಶಕ್ತಿಯ ಮೇಲೆ ನಿಂತಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ. ಬಸವಣ್ಣನವರ ಮಾತಿನಂತೆ ಇಂದು ಡಾ. ರಾಮನಗೌಡರ ಕುಟುಂಬವು ನಂದಿ ಶಕ್ತಿ ಕೇಂದ್ರ ನಿರ್ಮಾಣದ ಮೂಲಕ ಜನರಿಗೆ ಆರೋಗ್ಯದ ಭಾಗ್ಯ ಕಲ್ಪಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ.

ಕಳೆದ ಕೆಲವು ದಶಕಗಳಲ್ಲಿ ಸರ್ಕಾರಗಳು ತೈಲ ಶಕ್ತಿ ಬಳಕೆಗೆ ಪ್ರೋತ್ಸಾಹ ಹೆಚ್ಚಿಗೆ‌ ನೀಡಿ ನಂದಿ ಶಕ್ತಿ ಬಳಕೆಯನ್ನು ನಿರ್ಲಕ್ಷ ಮಾಡಿದ ಕಾರಣ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ ಸಾಗುತ್ತಿವೆ. ಭೂಮಿಯ ಮೇಲೆ ತೈಲ ಶಕ್ತಿಯು ಅಸುರಿ ಶಕ್ತಿಯನ್ನು ವೃದ್ಧಿ ಮಾಡಿದರೆ ನಂದಿ ಶಕ್ತಿಯು ದೈವಿಕ ಶಕ್ತಿಯನ್ನು ವೃದ್ಧಿ ಮಾಡುವುದು. 'ಕತ್ತಲನ್ನು ಹೋಗಲಾಡಿಸಲು ಬೆಳಕಿಗೆ ಮಾತ್ರ ಸಾಧ್ಯ' ಎನ್ನುವಂತೆ ಪುನಃ ನಂದಿ ಶಕ್ತಿಯ ಮೂಲಕ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸಲು ನಾವಿಂದು  ಪ್ರಯತ್ನಿಸಬೇಕಾಗಿದೆ. ಹೊಸ ತಂತ್ರಜ್ಞಾನಗಳ ಮೂಲಕ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಕೆ‌ ಮಾಡಿಕೊಂಡು ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ‌ ಮಾಡಬಹುದಾದ ಅನೇಕ ವೈಜ್ಞಾನಿಕ ಆವಿಷ್ಕಾರಗಳು ಈಗಾಗಲೇ ಅಭಿವೃದ್ಧಿಯಾಗಿವೆ. ಈ ಸತ್ಯವನ್ನು ಪರಿಚಯಿಸುವ ಉದ್ದೇಶದಿಂದ 'ಜೈ ನಂದಿ ಜೈ ಜಗತ್' ಎಂಬ ವೈಜ್ಞಾನಿಕ ಚಿಂತನಾ ಕಾರ್ಯಕ್ರಮವನ್ನು ನಂದಿ ಸಂತತಿಯನ್ನು ಪೋಷಿಸುತ್ತಿರುವ ರೈತರ ಜಮೀನುಗಳಲ್ಲಿ ಆಯೋಜಿಸಲಾಗುತ್ತಿದೆ.

ನಂದಿ ಶಕ್ತಿಯಿಂದ ವಿದ್ಯುತ್, ಗ್ಯಾಸ್, ಗಾಣದ ಎಣ್ಣೆ, ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು ತಯಾರಿಸಿ ಮಾರಾಟ ಮಾಡಬಹುದಾದ ನಂದಿ ಶಕ್ತಿ ಕೇಂದ್ರಗಳನ್ನು ನಿರ್ಮಿಸಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದಾದ ಮಾರ್ಗೋಪಾಯದ ಕುರಿತು ಚಿಂತನೆ ಮಾಡುವುದು 'ಜೈ ನಂದಿ ಜೈ ಜಗತ್' ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ರೈತ ನಾಯಕರು, ಔದ್ಯೋಗಿಕ ನಾಯಕರು, ರಾಜಕೀಯ ನಾಯಕರು ಹಾಗೂ ಆಧ್ಯಾತ್ಮಿಕ ನಾಯಕರು ಒಗ್ಗೂಡಿ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ  ಕುರಿತು ಚರ್ಚಿಸಲಾಗುವುದು. ನಂದಿ ಶಕ್ತಿಯಿಂದ ಸ್ವಾವಲಂಬಿ ರೈತ ಕುಟುಂಬಗಳು ನಿರ್ಮಾಣವಾದರೆ ಮಾತ್ರ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸಲು ಸಾಧ್ಯವಾಗುವುದು. ಸ್ವಾವಲಂಬಿ ಗ್ರಾಮಗಳು ನಿರ್ಮಾಣವಾದರೆ ಮಾತ್ರ ಭಾರತವು ಸ್ವಾವಲಂಬಿ ರಾಷ್ಟ್ರವಾಗಲು ಸಾಧ್ಯವಾಗುವುದು. ನಂದಿ ಶಕ್ತಿಯಿಂದ ಯಾವಾಗ ರಾಷ್ಟ್ರವು ಸ್ವಾವಲಂಬಿ ಆಗುವುದೋ ಅಂದು ಭಾರತವು ಜಗತ್ತಿಗೆ ವಿಶ್ವ ಗುರುವಾಗಲು ಸಾಧ್ಯವಾಗುವುದು....ಯೋಚಿಸಿ!
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ನಂದಿ ಗ್ರಾಮ‌ ಸ್ವರಾಜ್ಯದ ಕುರಿತು ಬರೆದಿರುವ  *ಜೈ ನಂದಿ ಜೈ ಜಗತ್'* ಪುಸ್ತಕ ಪಡೆಯಲು ಸಂಪರ್ಕಿಸಿ: https://drive.google.com/file/d/1vhlKlRA5v17fecKBtEKzgP6UwGyKl7hk/view?usp=drivesdk


ಸದ್ಗುರು ಅವರ ಶ್ರೀ ಲಿಂಗ ಭೈರವಿ ದೇವಿ ಸಾಧನ ಹಾಗೂ ಇತರ ಯೋಗ ಸಾಧನಗಳ ಮಹತ್ವದ ಕುರಿತು ಬರೆದ *ಸಾಧ್ಯತೆ* ಪುಸ್ತಕ ಪಡೆಯಲು ಸಂಪರ್ಕಿಸಿ: https://drive.google.com/file/d/10iO4AD23tTi-_YLhURqu3Ja4nBe5sohr/view?usp=sharing

...........................................
ಬಸವರಾಜ ಬಿರಾದಾರ
ನಾಯಕತ್ವ ಸಲಹೆಗಾರರು
9449303880 / missionsavesoil.com


1 comment:

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...