ಬನ್ನಿ! ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸಲು ಒಂದಾಗೋಣ.
ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ 3ನೇ ಪುಣ್ಯ ಸ್ಮರಣೆಯ
ಅಂಗವಾಗಿ ನಂದಿ ಕೂಗು ಅಭಿಯಾನದ ಅಡಿಯಲ್ಲಿ ಕನಿಷ್ಟ 330 ಜೋಡೆತ್ತಿನ ಬಂಡಿಗಳ ಸಮಾವೇಶ
ಹಾಗೂ ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ
ಚಿಂತನೆ ಕಾರ್ಯಕ್ರಮ ಜರಗುವುದು.
ಸ್ಥಳ:ಪೂಜ್ಯ
ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ಆಧ್ಯಾತ್ಮಿಕ ಪ್ರಪಂಚಕ್ಕೆ ಪಾದಾರ್ಪಣೆ ಮಾಡಲು
ಮೊದಲು ಪ್ರೇರಣೆ ನೀಡಿದ ಬಿಜ್ಜರಗಿ ಗ್ರಾಮದ ಶ್ರೀ ಸನ್ಯಾಸಪ್ಪನ ಮಠ (ರಾಮೇಶ್ವರ ಮಠ),
ತಾ: ತಿಕೋಟಾ ಜಿ: ವಿಜಯಪುರ
ದಿನಾಂಕ:ವೈಕುಂಠ ಏಕಾದಶಿಯ ದಿನವಾದ 30-12-2025 ರ ಮಂಗಳವಾರ ಮುಂಜಾನೆ 10 ಗಂಟೆಗೆ
🇳🇪ವಿಷಯ ವಿಶ್ಲೇಷಣೆ 🇳🇪
ಬಸವ ತತ್ವದಿಂದ ಸ್ವಾವಲಂಬಿ ಗ್ರಾಮಗಳನ್ನು ನಿರ್ಮಿಸುವ ಕುರಿತು ವೈಜ್ಞಾನಿಕ ಚಿಂತನೆ
ಬಸವ
ತತ್ವವೆಂದರೆ ಜೋಡೆತ್ತಿನ ರೈತರು ತಮ್ಮ ಕಾಯಕದಿಂದ ಪಂಚ ಮಹಾಭೂತಗಳ ಜೀವಂತಿಕೆಯನ್ನು
ಉಳಿಸುವುದರ ಜೊತೆಗೆ ಕಾಯಕ ಹಾಗೂ ದಾಸೋಹ ಸಂಸ್ಕೃತಿ ನಾಶವಾಗದಂತೆ ನೋಡಿಕೊಳ್ಳುವ ಕಲೆ
ಎಂದು ಅರ್ಥ. ಜೋಡೆತ್ತಿನ ರೈತರು ಉಳಿದರೆ ಮಾತ್ರ ಬಸವ ತತ್ವ ಉಳಿಯುವುದು ಎಂಬುದು ಇಂದಿನ
ಆಧುನಿಕ ವಿಜ್ಞಾನ, ಇತಿಹಾಸ ಹಾಗೂ ವಚನ ಸಾಹಿತ್ಯದಿಂದ ಸ್ಪಷ್ಟವಾಗಿ ತಿಳಿದು ಬರುತ್ತದೆ.
ಜೋಡೆತ್ತಿನ ಕೃಷಿಕರು ಹೆಚ್ಚಿಗೆ ಉಳಿದಿರುವ ಗ್ರಾಮಗಳಲ್ಲಿ ಪಂಚ ಮಹಾಭೂತಗಳು ಶುದ್ಧವಾಗಿ
ಉಳಿದಿರುವುದರ ಜೊತೆಗೆ ಬಹು ಜನರಿಗೆ ಉದ್ಯೋಗದ ಭದ್ರತೆ ಇರುವುದನ್ನು ವೈಜ್ಞಾನಿಕವಾಗಿ
ಪರೀಕ್ಷೆ ಮಾಡಿ ನೋಡಬಹುದಾಗಿದೆ.
ಐದು ಸಾವಿರ ವರ್ಷಗಳ ಹಿಂದೆ ನೈಸರ್ಗಿಕ ವಿಕೋಪದಿಂದ ವಿಶ್ವ ಪ್ರಸಿದ್ಧವಾದ ಸಿಂಧೂ ನದಿ
ಕಣಿವೆಯ ಹರಪ್ಪಾ ಮೊಹೆಂಜೋದಾರೊ ನಾಗರೀಕತೆ ನಾಶವಾದಂತೆ, ಇಂದು ನೈಸರ್ಗಿಕ ವಿಕೋಪ ಅಥವಾ
ಮಹಾಯುದ್ಧದಿಂದ ಭಾರತ ದೇಶಕ್ಕೆ ಮುಂದಿನ ಐದು ವರ್ಷಗಳ ವರೆಗೆ ತೈಲ ಪೂರೈಕೆ ಸಂಪೂರ್ಣವಾಗಿ
ನಿಂತು ಹೋದರೆ, ಜೋಡೆತ್ತಿನ ಕೃಷಿಕರಿರುವ ಭೂ ಪ್ರದೇಶದ ಮಠ ಮಾನ್ಯಗಳ ಕಾಯಕ ಹಾಗೂ
ದಾಸೋಹ ಮಾತ್ರ ಜೀವಂತವಾಗಿ ಉಳಿಯಲು ಸಾಧ್ಯವಾಗುವುದು. ಹಾಗಾಗಿ, ಕಾಯಕ ಹಾಗೂ ದಾಸೋಹದ
ಜೀವಂತಿಕೆ ನಾಲ್ಕು ಕಾಲಿನ ಬಸವಣ್ಣಗಳ ಸಂತತಿಯನ್ನು ಅವಲಂಬಿಸಿದೆ ಎಂಬುದು ಸ್ಪಷ್ಟವಾಗಿ
ತಿಳಿಯುತ್ತದೆ. ಕ್ರಿಸ್ತಶಕ 6 ರಿಂದ 12 ನೇ ಶತಮಾನದ ಕಾಲಘಟ್ಟದಲ್ಲಿ ಜೋಡೆತ್ತಿನ ಕೃಷಿಕರ
ಬಸವ ತತ್ವದ ಅನುಷ್ಠಾನದಿಂದ ರಾಜರುಗಳು ಸುಸಂಸ್ಕೃತ ಸಮಾಜ ನಿರ್ಮಿಸಿದರು.
ರಾಷ್ಟ್ರಕೂಟರು, ಚಾಲುಕ್ಯರು, ಚೋಳರು, ಹೊಯ್ಸಳರು, ಕದಂಬರು, ಪಲ್ಲವರು, ಪಾಂಡ್ಯರು ಹೀಗೆ
ಅನೇಕ ಸಾಮ್ರಾಜ್ಯದ ರಾಜರುಗಳು ಜೋಡೆತ್ತಿನ ಕೃಷಿಕರ ಬಸವ ತತ್ವದ ಅನುಷ್ಠಾನದಿಂದ
ಶ್ರೇಷ್ಠ ಸಾಮ್ರಾಜ್ಯಗಳನ್ನು ನಿರ್ಮಿಸಿದ ನಂತರ ವಿವಿಧ ಹೆಸರಿನ ಶಿವಾಲಯಗಳನ್ನು
ನಿರ್ಮಿಸಿ ಶಿವಲಿಂಗದ ಮುಂದೆ ನಂದಿ ಮೂರ್ತಿ ಪ್ರತಿಷ್ಠಾಪಿಸಿದರು. ಜೋಡೆತ್ತಿನ ಕೃಷಿಕರ
ಬಸವ ತತ್ವದ ಅನುಷ್ಠಾನದ ಫಲದಿಂದ ನಿರ್ಮಿತವಾದ ಲಕ್ಷಾಂತರ ಶಿವಾಲಯಗಳು ಭಾರತ ದೇಶದ ಬಹು
ಜನರ ಆರಾಧ್ಯ ದೈವವಾಗಿ ತಲೆ ಎತ್ತಿ ನಿಂತಿವೆ. ಪ್ರತಿಯೊಂದು ಶಿವಾಲಯದಲ್ಲಿರುವ ನಂದಿ
ಮೂರ್ತಿಯು ಭಾರತ ದೇಶದ ಕೃಷಿಕರ ಭಾವೈಕ್ಯತೆಯ ಸಂಕೇತವಾಗಿವೆ
"ಕೃಷಿ ಕೃತ್ಯ ಕಾಯಕ ಮಾಡುವ ಸದ್ಭಕ್ತನ ಪಾದವ ತೋರಿ ಬದುಕಿಸಯ್ಯಾ, ಆತನ ತನು ಶುದ್ಧ,
ಆತನ ಮನ ಶುದ್ಧ, ಆತನ ಮನೆ ಹೊಕ್ಕು ಲಿಂಗಾರ್ಚನೆ ಮಾಡುವ ಗುರು ಪಾವನ ನೋಡಾ ಕೂಡಲ
ಸಂಗಮದೇವ" ಎಂಬ ವಚನದ ಮೂಲಕ ವಿಶ್ವಗುರು ಬಸವಣ್ಣನವರು ಜೋಡೆತ್ತಿನ ಕೃಷಿಕರ ಬಸವ ತತ್ವದ
ಮಹತ್ವವನ್ನು ತಿಳಿಸಿದ್ದಾರೆ. ಸಮಾಜದಲ್ಲಿ ಜೋಡೆತ್ತಿನ ಕೃಷಿಕರ ಪಾದಗಳ ಕೊರತೆಯಾದರೆ
ಸಮಾಜದ ಮಾರ್ಗದರ್ಶಕರಾದ ಗುರುಗಳಿಗೆ ಭವಿಷ್ಯವಿಲ್ಲವೆಂಬುದನ್ನು ಬಸವಣ್ಣನವರು
ಸ್ಪಷ್ಟವಾಗಿ ತಿಳಿಸಿದ್ದಾರೆ. ನಂದಿಯು ಯುಗ ಯುಗಾಂತರಗಳಿಂದ ಗುರು ಶಿಷ್ಯ ಪರಂಪರೆಯ ಮೂಲ
ಕೊಂಡಿಯಾಗಿ ಕೆಲಸ ಮಾಡುತ್ತಾ ಬರುತ್ತಿರುವ ಕಾರಣ ಗುರುವೆಂಬ ಲಿಂಗದ ಮುಂದೆ ಅಥವಾ
ಗುರುವಿನ ಸಮಾಧಿಯ ಮೇಲೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತಿದೆ.
ಕಳೆದ ಕೆಲವು ದಶಕಗಳಲ್ಲಿ ಜೋಡೆತ್ತಿನ ಕೃಷಿಕರ ಬಸವ ತತ್ವಕ್ಕೆ ವಿರುದ್ಧವಾದ ಪೆಟ್ರೋಲ್
ಹಾಗೂ ಡೀಸೆಲ್ ಆಧಾರಿತ ತೈಲ ತತ್ವಕ್ಕೆ ಸರ್ಕಾರಗಳು ಹೆಚ್ಚು ಆದ್ಯತೆ ನೀಡುತ್ತಾ ಬಂದ
ಕಾರಣ ಜೋಡೆತ್ತಿನ ಕೃಷಿಕರು ನಾಶವಾಗಿ ಗ್ರಾಮಗಳು ಸರ್ವ ರೀತಿಯಲ್ಲಿ ಪರಾವಲಂಬಿಗಳಾಗುತ್ತಾ
ಸಾಗುತ್ತಿವೆ. ಜೋಡೆತ್ತಿನ ಕೃಷಿಕರ ಸಂಖ್ಯೆ ಕಡಿಮೆಯಾದಂತೆ ಗ್ರಾಮಗಳಲ್ಲಿ ಇತರ ಪಶು ಸಂಪತ್ತು ನಾಶವಾಗಿ ಎಲ್ಲ ರೈತರಿಗೂ ಕೂಡ ತಿಪ್ಪೆ ಗೊಬ್ಬರದ ಕೊರತೆಯಾಗುತ್ತಿದೆ. ಇದರಿಂದ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿ ಬೆಳೆಗಳ ಗುಣಮಟ್ಟ ಮತ್ತು ಇಳುವರಿ ಕುಂಠಿತವಾಗುತ್ತಿದೆ. ಜೋಡೆತ್ತಿನ ಕೃಷಿ ನಾಶವಾದಂತೆ ರೈತರ ಸಾಗುವಳಿ ವೆಚ್ಚ ಹೆಚ್ಚಾಗುತ್ತಿದೆ. ರೈತರ ಸಾಲ ಹೆಚ್ಚಾಗುತ್ತಿದೆ. ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ದಿನಕಳೆದಂತೆ ರೈತರು ದೈಹಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ. ಅದಕ್ಕಾಗಿ, ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ರೂ. 11000
ಪ್ರೋತ್ಸಾಹ ಧನ ನೀಡುವ ಯೋಜನೆ ಜಾರಿಗೆ ತಂದು ಬಸವ ತತ್ವ ಉಳಿಸುವ ಕಾರ್ಯಕ್ಕೆ
ಪ್ರತಿಯೊಬ್ಬರೂ ಕೂಡ ಕೈ ಜೋಡಿಸಬೇಕಾದ ಅವಶ್ಯಕತೆ ಬಂದೊದಗಿದೆ.
ಆಧುನಿಕ ತಂತ್ರಜ್ಞಾನಗಳಿಂದ ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು
ವಿದ್ಯುತ್, ಗ್ಯಾಸ್, ಅಮೃತಯುಕ್ತ ಆಹಾರ, ಜೈವಿಕ ಗೊಬ್ಬರ ಹಾಗೂ ಔಷಧಿಗಳನ್ನು
ಉತ್ಪಾದಿಸುವ ಸಮಗ್ರ ಯೋಜನೆಯನ್ನು ಜಾರಿಗೆ ತಂದು ರೈತರನ್ನು ಹಾಗೂ ಗ್ರಾಮಗಳನ್ನು
ಸ್ವಾವಲಂಬಿಗಳನ್ನಾಗಿ ಮಾಡಬೇಕಾಗಿದೆ. ಅದಕ್ಕಾಗಿ, ರೈತ ನಾಯಕರು, ಔದ್ಯೋಗಿಕ ನಾಯಕರು,
ರಾಜಕೀಯ ನಾಯಕರು ಹಾಗೂ ಆಧ್ಯಾತ್ಮಿಕ ನಾಯಕರು ಒಗ್ಗೂಡಿ ಜೋಡೆತ್ತಿನ ಕೃಷಿಕರ ಬಸವ
ತತ್ವದ ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸುವ ಕಾರ್ಯಕ್ಕೆ
ಮುಂದಾಗಬೇಕಾಗಿದೆ. ಹೊಸ ತಂತ್ರಜ್ಞಾನಗಳು ಹಾಗೂ ಜೊಡೆತ್ತಿನ ಕೃಷಿಕರ ಬಸವ ತತ್ವದ
ಅನುಷ್ಠಾನದಿಂದ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿ ಮಾಡಬಹುದಾದ ಸಾಧ್ಯತೆಯ ಕುರಿತು
ವೈಜ್ಞಾನಿಕವಾಗಿ ಚಿಂತನೆ ಮಾಡುವ ಉದ್ದೇಶದಿಂದ ಜನಜಾಗೃತಿ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದು ಸರ್ವರಿಗೂ ಕೂಡ ಒಳಿತನ್ನು ಉಂಟುಮಾಡುವ ಕಾರ್ಯವಾಗಿದೆ...ಯೋಚಿಸಿ!
ಬಸವ ತತ್ವದಿಂದ ಗ್ರಾಮಗಳನ್ನು ಸ್ವಾವಲಂಬಿ ಗೊಳಿಸುವ ಸಾಧ್ಯತೆಯ ಕುರಿತು ಬರೆದಿರುವ *ಜೈ ನಂದಿ ಜೈ ಜಗತ್'* ಪುಸ್ತಕ ಪಡೆಯಲು ಸಂಪರ್ಕಿಸಿ:
No comments:
Post a Comment