ಭಾರತ ದೇಶದಲ್ಲಿ ಎತ್ತುಗಳ ಶಕ್ತಿಯ ಬಳಕೆ ಎಷ್ಟು ಕಡಿಮೆಯಾಗುವುದೋ ಅಷ್ಟು ಬೇಗನೆ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಯುಗ ಅಂತ್ಯವಾಗುವುದು ಎಂಬುದನ್ನು ವೈಜ್ಞಾನಿಕ ಅಂಕಿ ಅಂಶಗಳು ಸ್ಪಷ್ಟವಾಗಿ ತಿಳಿಸುತ್ತಿವೆ. ಕರ್ನಾಟಕ ರಾಜ್ಯದ ಕಬ್ಬು ಬೆಳೆಗಾರರು ಬೀದಿಗೆ ಬಂದು ಪ್ರತಿ ಟನ್ ಕಬ್ಬಿಗೆ ರೂ. 3300 ಪಡೆಯಲು ಯಶಸ್ವಿಯಾಗಿದ್ದಾರೆ. ರೈತರ ಈ ಯಶಸ್ಸು ರಾಜ್ಯದ ಬಹು ಸಂಖ್ಯೆ ರೈತರನ್ನು ಒಗ್ಗೂಡಿಸಲು ಪ್ರಾರಂಭಿಸಿದೆ. ಮುಂದೆ ಇದು ದೇಶವ್ಯಾಪಿಯಾಗಿ ಬೆಳೆದು ದೊಡ್ಡ ಚಳುವಳಿಯ ರೂಪ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬ ರೈತನನ್ನು ಎಚ್ಚರಿಸಬಹುದಾದ ಸಮಾಜದಲ್ಲಿ ನಾವಿರುವುದರಿಂದ ರೈತರು ಖಂಡಿತ ಒಗ್ಗೂಡಲು ಪ್ರಾರಂಭಿಸುವರು. ಅನೇಕ ಆಧ್ಯಾತ್ಮಿಕ ನಾಯಕರು ಕೂಡ ರೈತ ಸಂಘಟನೆಗೆ ಬೆನ್ನೆಲುಬಾಗಿ ನಿಂತಿರುವುದರಿಂದ ಸಂಘಟನಾ ಶಕ್ತಿ ಮುಂದಿನ ದಿನಗಳಲ್ಲಿ ಖಂಡಿತ ವೃದ್ಧಿಸುವುದು. ಮುಂದಿನ ವರ್ಷಗಳಲ್ಲಿ ದೇಶದ ರೈತರು ಸಂಘಟಿತವಾಗಿ ಹೋರಾಟ ಮಾಡಿ ಸಕ್ಕರೆ ಕಾರ್ಖಾನೆಗಳು ರೈತರ ಬೇಡಿಕೆಗೆ ಶರಣಾಗುವಂತೆ ಮಾಡುವವು. ಇಂತಹ ಸಂದರ್ಭದಲ್ಲಿ ದೂರ ದೃಷ್ಟಿಕೋನವಿರುವ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಮಾತ್ರ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಕಂಡುಕೊಳ್ಳಲು ಸಾಧ್ಯವಿದೆ.
ನೀರು ಇಲ್ಲದೆ ಮರ ಜೀವಂತವಾಗಿ ಇರಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಎತ್ತುಗಳ ಶಕ್ತಿಯನ್ನು ಬಳಸಿಕೊಳ್ಳದಿದ್ದರೆ ಬಯಲು ಸೀಮೆಯ ಮಣ್ಣಿನ ಜೀವಂತಿಕೆ ಉಳಿಸಲು ಸಾಧ್ಯವಿಲ್ಲ. ಎತ್ತುಗಳ ಉಳುಮೆಯು ಬಯಲು ಸೀಮೆಯ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಾಪಾಡುವ ಸುಂದರ ನೈಸರ್ಗಿಕ ವ್ಯವಸ್ಥೆಯಾಗಿದೆ. ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾಗುವುದು ಹೆಚ್ಚಾದಂತೆ ಎಲ್ಲ ಬೆಳೆಗಳ ಇಳುವರಿ ಕುಂಠಿತವಾಗುತ್ತಿವೆ. ಅತೀ ಹೆಚ್ಚು ಪೋಷಕಾಂಶಗಳನ್ನು ಬೇಡುವ ಕಬ್ಬಿನ ಬೆಳೆ ಕ್ಷೇತ್ರ ಹೆಚ್ಚಾಗುತ್ತಾ ಸಾಗಿದಂತೆ ನಂದಿ ಸಂಪತ್ತು ನಾಶ ಆಗುತ್ತಿರುವುದರಿಂದ ಕಬ್ಬಿನ ಇಳುವರಿ ಹಾಗೂ ಗುಣಮಟ್ಟ ಕುಂಠಿತವಾಗುತ್ತಿದೆ. ಇದರ ದುಷ್ಪರಿಣಾಮ ಸುಗರ್ ರಿಕವರಿ ಕಡಿಮೆ ಆಗುವ ಮೂಲಕ ವ್ಯಕ್ತವಾಗುತ್ತಿದೆ. ಎತ್ತಿನ ಕೃಷಿ ಕಡಿಮೆಯಾದಂತೆ ಬಯಲು ಸೀಮೆಯ ಹಲವು ಜಿಲ್ಲೆಗಳ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಈಗಾಗಲೇ 0.5 ಪ್ರತಿಶತಕ್ಕಿಂತ ಕಡಿಮೆಯಾಗಿರುವುದು ಆತಂಕಕಾರಿ ಸಂಗತಿಯಾಗಿದೆ.
ಎತ್ತಿನ ಉಳುಮೆಯು ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಾಪಾಡುವ ಶ್ರೇಷ್ಠ ನೈಸರ್ಗಿಕ ತಂತ್ರಜ್ಞಾನವಾಗಿದೆ. ಎತ್ತಿನ ಕೃಷಿಯಿಂದ ಇತರ ಪಶು ಸಂಪತ್ತು ಉಳಿದು ಭೂಮಿಗೆ ಅವಶ್ಯವಿರುವ ತಿಪ್ಪೆ ಗೊಬ್ಬರ ಎಲ್ಲ ರೈತರಿಗೆ ಕಡಿಮೆ ದರದಲ್ಲಿ ದೊರೆತು ಮಣ್ಣಿನ ಫಲವತ್ತತೆ ಉಳಿಯಲು ಸಾಧ್ಯವಾಗುವುದು. ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಕಬ್ಬಿನ ಸುಗರ್ ರಿಕವರಿ ಹೆಚ್ಚಿಗೆ ಇರುವುದಕ್ಕೆ ಮೂಲ ಕಾರಣ ಎತ್ತಿನ ಕೃಷಿಯೊಂದಿಗೆ ಅತೀ ಹೆಚ್ಚು ಪಶು ಸಂಪತ್ತು ಉಳಿದಿರುವುದಾಗಿದೆ. ಹಾಗಾಗಿ, ಬಯಲು ಸೀಮೆಯ ಮಣ್ಣಿನ ಜೀವಂತಿಕೆ ಎತ್ತುಗಳ ಮೇಲೆ ನಿಂತಿದೆ. ಕಳೆದ ಎರಡು ದಶಕಗಳಲ್ಲಿ ಸರ್ಕಾರಗಳು ಯಂತ್ರಗಳಿಗೆ ದೊಡ್ಡ ಪ್ರಮಾಣದ ಪ್ರೋತ್ಸಾಹ ನೀಡಿ ಜೋಡೆತ್ತಿನ ಕೃಷಿಕರಿಗೆ ಯಾವುದೇ ಪ್ರೋತ್ಸಾಹ ನೀಡದೇ ಇರುವುದರಿಂದ ಪ್ರತಿ ಗ್ರಾಮದಲ್ಲಿ 80 ಪ್ರತಿಶತ ಜೋಡೆತ್ತಿನ ಕೃಷಿ ನಾಶವಾಗಿದೆ. ಇದರಿಂದ, ಸಾವಿರಾರು ವರ್ಷಗಳಿಂದ ಸರ್ವರ ಒಳಿತಿಗಾಗಿ ದುಡಿಯುತ್ತಾ ಬಂದಿರುವ ಎತ್ತುಗಳು ಕಾಸಾಯಿಖಾನೆಯ ಪಾಲಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಸರ್ವರೂ ಕೂಡ ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗುವುದು. ಇಂದು ನಾವೆಲ್ಲರೂ ಒಗ್ಗೂಡಿ ಪ್ರಜ್ಞಾವಂತಿಕೆಯಿಂದ ಹೆಜ್ಜೆ ಇಡದಿದ್ದರೆ ದೊಡ್ಡ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಒದ್ದಾಡುವುದು ನಿಶ್ಚಿತವಾಗುತ್ತಿದೆ. ಕೃಷಿಕರು, ಉದ್ದಿಮೆದಾರರು ಹಾಗೂ ರಾಜಕೀಯ ನಾಯಕರು ಪ್ರಜ್ಞಾವಂತಿಕೆಯಿಂದ ಮುಂದೆ ಹೆಜ್ಜೆ ಇಡಬೇಕಾದ ಸಂದರ್ಭ ಇದಾಗಿದೆ...ಯೋಚಿಸಿ!
ನಂದಿ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು ಕೃಷಿ, ಉದ್ದಿಮೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವ ಮಾರ್ಗೋಪಾಯದ ಕುರಿತು ಬರೆದಿರುವ 'ಜೈ ನಂದಿ ಜೈ ಜಗತ್' ಪುಸ್ತಕವನ್ನು ಈ ಕೆಳಗಿನ ಲಿಂಕ್ ಮೂಲಕ ಪಡೆದು ಓದಬಹುದು
https://drive.google.com/file/d/1QQf53JxDRHV0-x6lEFCrHEGRDEeIbPmH/view?usp=drivesdk
........................................
ಬಸವರಾಜ ಬಿರಾದಾರ, ನಾಯಕತ್ವ ಸಲಹೆಗಾರ ಹಾಗೂ ನಂದಿ ಕೃಷಿ ತಜ್ಞ, 9449303880 / missionsavesoil.com


No comments:
Post a Comment