Thursday, October 30, 2025

ದಿಕ್ಸೂಚಿ ಇಲ್ಲದ ಹಡಗಿನಲ್ಲಿ ಪಯಣಿಸುತ್ತಿರುವ ಹಿಂದು ವೀರಶೈವ ಲಿಂಗಾಯತದ ರಾಜಕೀಯ ನಾಯಕರು

ದಿಕ್ಸೂಚಿ ಇಲ್ಲದ ಹಡಗು ನಿರ್ದಿಷ್ಟ ಗುರಿ ತಲುಪಲು ಸಾಧ್ಯವಿಲ್ಲ. ಇದೇ ರೀತಿ, ನಿರ್ದಿಷ್ಟ ಗುರಿ ತಲುಪಲು ಸಾಧ್ಯವಿಲ್ಲದ ಹಡಗಿನಲ್ಲಿ ಕುಳಿತು ಪಯಣಿಸುವ ವಾತಾವರಣ ಹಿಂದು ವೀರಶೈವ ಲಿಂಗಾಯತ ರಾಜಕೀಯ ನಾಯಕರಿಗೆ ‌ನಿರ್ಮಾಣವಾಗಿದೆ. ನಿರ್ದಿಷ್ಟ ಗುರಿ ತೋರಿಸುವ ಗುರು ಹಾಗೂ ಗುರಿ ತಲುಪಲು ಸಹಾಯ ಮಾಡುವ 'ನಂದಿ' ಎಂಬ ದಿಕ್ಸೂಚಿಯ ಕೊರತೆ ಹಿಂದು ವೀರಶೈವ ಲಿಂಗಾಯತ ಸಮಾಜಕ್ಕೆ ಉಂಟಾಗಿದೆ. ಸಾವಿರಾರು ವರ್ಷಗಳಿಂದ ಹಿಂದು ವೀರಶೈವ ಲಿಂಗಾಯತರಿಗೆ ನಂದಿಯು ದಿಕ್ಸೂಚಿಯಾಗಿ ಕೆಲಸ ಮಾಡಿ ನಿರ್ದಿಷ್ಟ ಗುರಿಯೆಡೆಗೆ ತಲುಪಿಸುತ್ತಾ ಬಂದಿರುವ ಇತಿಹಾಸವಿದೆ. ಹಿಂದೆ ಯಾವ ಪೂಜ್ಯರು ಹಾಗೂ ರಾಜಕೀಯ ನಾಯಕರು ನಂದಿ‌ ಎಂಬ ದಿಕ್ಸೂಚಿಯನ್ನು ಅವಲಂಬಿಸಿ‌ ಮುನ್ನಡೆಯಲು ಪ್ರಯತ್ನಿಸಿರುವರೋ ಅವರು ಇತಿಹಾಸ ನಿರ್ಮಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪೂಜ್ಯರ ಸಮಾಧಿಗಳ ಮೇಲೆ ನಂದಿಯನ್ನು ಇಟ್ಟು ಪೂಜಿಸುವ ಸಂಪ್ರದಾಯ ರೂಢಿಯಲ್ಲಿದೆ. ಬೃಹತ್‌ ಗಾತ್ರದ ನಂದಿ ವಿಗ್ರಹಗಳು‌, ನಂದಿ ದೇವಸ್ಥಾನಗಳು ಹಾಗೂ ನಂದಿ ಮೂರ್ತಿ ಹೊಂದಿದ ವಿವಿಧ ಹೆಸರಿನ ಶಿವಾಲಯಗಳನ್ನು ಹಿಂದಿನ ರಾಜರು ನಿರ್ಮಾಣ ಮಾಡಿರುವುದು ನಂದಿ ಶಕ್ತಿಯಿಂದ‌ ಸಾಮ್ರಾಜ್ಯ ನಿರ್ಮಿಸಿರುವುದರ ಸಂಕೇತವಾಗಿವೆ. ಭಾರತ ದೇಶದ ಮಣ್ಣಿನ ಗುಣಲಕ್ಷಣವನ್ನು ಅರಿತು ನಡೆದ ಹಿಂದಿನ ರಾಜರುಗಳಿಗೆ ಯಾವುದೋ ರೂಪದಲ್ಲಿ ನಂದಿಯು ದಿಕ್ಸೂಚಿಯಾಗಿ ನಿರ್ದಿಷ್ಟ ಗುರಿ ತಲುಪಿಸುತ್ತಾ ಬಂದಿದ್ದಾನೆ. ಇಂದು ಹಾಗೂ ಮುಂದೆಯೂ ಕೂಡ ನಂದಿಯು ಸಮಾಜಕ್ಕೆ ದಿಕ್ಸೂಚಿಯಾಗಿ ಕೆಲಸ ಮಾಡಲಿದ್ದಾನೆ ಎಂಬುದು ವೈಜ್ಞಾನಿಕವಾಗಿ ತಿಳಿಯುತ್ತಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಯಾವ ರಾಜಕೀಯ‌ ನಾಯಕರು‌ ನಂದಿಯೆಂಬ ದಿಕ್ಸೂಚಿಯನ್ನು ಅವಲಂಬಿಸಿ ನಡೆಯಲು ಪ್ರಯತ್ನಿಸುವರೋ ಅವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿದೆ ಎಂಬುದನ್ನು ಇತಿಹಾಸ ಹಾಗೂ ಇಂದಿನ ಜಾಗತಿಕ ವಿದ್ಯಮಾನಗಳು ಸ್ಪಷ್ಟವಾಗಿ ತಿಳಿಸುತ್ತಿವೆ. 

ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಶಿರ್ವಾದದಿಂದ ನಂದಿ ಕೃಷಿ ಪುನರುಜ್ಜೀವನಕ್ಕಾಗಿ  'ನಂದಿ ಕೂಗು' ಅಭಿಯಾನವು ಎರಡು ವರ್ಷಗಳ ಹಿಂದೆ ಪ್ರಾರಂಭವಾಗಿದೆ. ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಕಳೆದ‌ ವರ್ಷದ ಗೌರಿ ಹುಣ್ಣಿಮೆಯ ದಿನದಂದು ವಿಜಯಪುರದ ಜ್ಞಾನಯೋಗಾಶ್ರಮದಿಂದ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಜನ್ಮ ಸ್ಥಳವಾದ ಬಿಜ್ಜರಗಿ ಗ್ರಾಮದ ವರೆಗೆ ನಂದಿ ಕೃಷಿಕರ ಒಳಿತಿನ ಉದ್ದೇಶದಿಂದ ಎತ್ತಿನ ಬಂಡಿಗಳೊಂದಿಗೆ ಪಾದಯಾತ್ರೆ ಮಾಡಲಾಯಿತು. ಶ್ರೀ ಸಿದ್ಧೇಶ್ವರ ಶ್ರೀಗಳು 14 ವರ್ಷ ತಮ್ಮ ಬಾಲ್ಯ ಜೀವನವನ್ನು ಕಳೆದ ಬಿಜ್ಜರಗಿಯ ಅವರ ಪೂರ್ವಾಶ್ರಮ‌ ಮನೆಯಲ್ಲಿ‌ ಕರಭಂಟನಾಳದ ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಐತಿಹಾಸಿಕವಾದ ಸಂಕಲ್ಪ‌ ಕಾರ್ಯಕ್ರಮ ಜರುಗಿತು. "ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತು ಹೆಚ್ಚಿಸುವ ಸಂಕಲ್ಪ" ಮಾಡಲಾಯಿತು. ಸಂಕಲ್ಪ ವಿಧಿಯನ್ನು ಅಂತರಾಷ್ಟ್ರೀಯ ಕೃಷಿ ವಿಜ್ಞಾನಿಗಳಾದ ಡಾ. ಚಂದ್ರಶೇಖರ ‌ಬಿರಾದಾರ ಅವರು ಜನರಿಗೆ ಬೋಧಿಸಿದರು. ಶ್ರೀ ಸಿದ್ಧೇಶ್ವರ ಶ್ರೀಗಳ ಸಹೋದರರಾದ ಶ್ರೀ ಸೋಮಲಿಂಗ ಅಜ್ಜನವರು, ಶ್ರೀ ಅಮರೇಶ ಅಜ್ಜನವರು, ಪಾದಯಾತ್ರೆಗೈದ ಯುವ ನಾಯಕರಾದ ಶ್ರೀ ಉಮೇಶ ವಂದಾಲ, ಸಿರಿಧಾನ್ಯ ಹೊಟೇಲ್ ಉದ್ದಿಮೆದಾರರಾದ ಶ್ರೀ ಮಲ್ಲಿಕಾರ್ಜುನ ಹಟ್ಟಿ ಹಾಗೂ ಇತರರು ಸಂಕಲ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮುಂದಿನ 10 ವರ್ಷಗಳಲ್ಲಿ 10 ಪಟ್ಟು ನಂದಿ ಸಂಪತ್ತನ್ನು ಹೆಚ್ಚಿಸುವ ಸಂಕಲ್ಪವನ್ನು ಸಮಾಜದ ಗುರಿಯನ್ನಾಗಿಸಿ ಒಗ್ಗೂಡಿ ಮುಂದೆ‌ ನಡೆದರೆ ಮುಂದೆ ಸಮಾಜಕ್ಕೆ ಆಗಬಹುದಾದ ಒಳಿತುಗಳೇನು? ಅಥವಾ ನಂದಿ ಸಂಪತ್ತು ನಾಶವಾಗುತ್ತಲೇ‌ ಸಾಗಿದರೆ ಮುಂದೆ ಸಮಾಜಕ್ಕೆ ಎದುರಾಗಬಹುದಾದ ಸಮಸ್ಯೆಗಳೇನು? ಎಂಬುದರ ಕುರಿತು ಇಂದಿನ ರಾಜಕೀಯ ನಾಯಕರು ಒಮ್ಮೆ ಯೋಚಿಸಿ ಮುಂದೆ ಹೆಜ್ಜೆ‌ ಇಡಬೇಕಾದ ಸಂದರ್ಭ ಬಂದೊದಗಿದೆ.

ನಂದಿ ಶಕ್ತಿಯ‌ ಮಹತ್ವ ಅರಿತು ನಡೆಯುವವರನ್ನು ಮಾತ್ರ ಹಿಂದುಗಳು ಅಥವಾ ವೀರಶೈವರು ಅಥವಾ ಲಿಂಗಾಯತರು ಎಂದು ಗುರುತಿಸುವ ಕಾಲ ಬರುವುದು ಬಹಳ ದೂರ ಉಳಿದಿಲ್ಲ.  ಏಕೆಂದರೆ, ಯಾವುದೇ ವಸ್ತುವಿನ ಬೆಲೆ ಅದನ್ನು ಕಳೆದುಕೊಂಡಾಗ ಮಾತ್ರ ತಿಳಿಯುವುದು. ಈ ಸತ್ಯದ ಪರಿಚಯವನ್ನು ಮಾಡುವ ಉದ್ದೇಶದಿಂದ ಜೈ ನಂದಿ ಜೈ ಜಗತ್' ಎಂಬ ಪುಸ್ತಕವನ್ನು ಬರೆಯಲಾಗಿದೆ. ಪುಸ್ತಕವನ್ನು ಈ ಕೆಳಗಿನ ಲಿಂಕ್ ಮೂಲಕ ಪಡೆದು ಓದಬಹುದು.

https://drive.google.com/file/d/1UOdD0r1yZti0mPtimCSx2Yb5BSNczLhV/view?usp=sharing 


 ...............................................
ಬಸವರಾಜ ಬಿರಾದಾರ
ನಾಯಕತ್ವ ಸಲಹೆಗಾರ ಹಾಗೂ ನಂದಿ ಕೃಷಿ ತಜ್ಞ, 9449303880 / missionsavesoil.com

No comments:

Post a Comment

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...