Saturday, October 25, 2025
ಜೈ ನಂದಿ, ಜೈ ಜಗತ್
ಭಾರತ ದೇಶದ ಮೇಲೆ ವಿದೇಶಿಗರು ಆಕ್ರಮಣ ಮಾಡಿರುವ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ. ಆದರೆ, ಭಾರತೀಯರು ವಿದೇಶಿ ನೆಲವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸದೇ ಇರುವುದಕ್ಕೆ ಮೂಲ ಕಾರಣವೇನು? ಎಂಬುದಕ್ಕೆ ಸ್ಪಷ್ಟ ಉತ್ತರ ಕಂಡುಕೊಂಡರೆ ಭವಿಷ್ಯದಲ್ಲಿ ಭಾರತೀಯರು ಯಾವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಅರ್ಥವಾಗುತ್ತದೆ. ಯಾವ ಭೂ ಪ್ರದೇಶದ ಜನರಿಗೆ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವ ಸಾಮರ್ಥ್ಯ ಹೆಚ್ಚಿಗೆ ಇರುವುದೋ ಆ ಭೂಪ್ರದೇಶದ ಮೇಲೆ ಪರಾವಲಂಬಿಗಳಾಗಿ ಬದುಕುವ ಅನಿವಾರ್ಯತೆ ಇರುವ ಇತರ ಭೂ ಪ್ರದೇಶದ ಜನರು ಆಕ್ರಮಣ ಮಾಡುವುದು ಸಾಮಾನ್ಯ ಸಂಗತಿಯಾಗಿದೆ. ಜಗತ್ತಿನಲ್ಲಿ ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳುವ ಸಾಮರ್ಥ ಇರುವ ಅತೀ ಹೆಚ್ಚು ಜನರನ್ನು ಹೊಂದಿದ ಭೂ ಪ್ರದೇಶವೇ ಭಾರತವಾಗಿದೆ. ಇದೇ ಕಾರಣಕ್ಕೆ, ವಿದೇಶಿಗರಿಂದ ಅತೀ ಹೆಚ್ಚು ಆಕ್ರಮಣಕ್ಕೆ ಒಳಗಾದ ಭೂ ಪ್ರದೇಶ ಭಾರತವಾಗಿದೆ. ಭಾರತೀಯರು ಸ್ವಾವಲಂಬಿಗಳಾಗಿ ಜೀವನ ಕಟ್ಟಿಕೊಳ್ಳಲು ಅನಾದಿ ಕಾಲದಿಂದ ರೈತರ ಬೆನ್ನೆಲುಬಾಗಿ ನಿಂತಿರುವುದು ನಂದಿ ಶಕ್ತಿಯಾಗಿದೆ.
ಭಾರತ ದೇಶದ ನಂದಿ ಸಂಪತ್ತು ಅಮೇರಿಕ, ಬ್ರೆಜಿಲ್, ಇರಾನ್, ಈಜಿಪ್ಟ್ ಹೀಗೆ ಹಲವು ದೇಶಗಳಿಗೆ ರಪ್ತಾದ ಸಾವಿರಾರು ವರ್ಷಗಳ ಇತಿಹಾಸವಿದೆ. ಭಾರತ ದೇಶದ ನಂದಿ ಸಂಪತ್ತು ವಿದೇಶಗಳಿಗೆ ರಪ್ತಾದರೂ ಸಹ ಅವುಗಳನ್ನು ಸಮರ್ಥವಾಗಿ ಕೃಷಿ ಚಟುವಟಿಕೆಯಲ್ಲಿ ಬಳಸಬಹುದಾದ ವಾತಾವರಣ ಭಾರತ ದೇಶದಲ್ಲಿದೆ. ನಂದಿ ಸಂಪತ್ತನ್ನು ಕೃಷಿಯಲ್ಲಿ ಸಮರ್ಥವಾಗಿ ಬಳಸುವ ಕೌಶಲ್ಯವನ್ನು ಹೊಂದಿದ ಅತೀ ಹೆಚ್ಚು ರೈತರೂ ಕೂಡ ಭಾರತದಲ್ಲಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ತೈಲ ಶಕ್ತಿ ಆಧಾರಿತ ಯಂತ್ರಗಳು ಹಾಗೂ ರಾಸಾಯನಿಕಗಳ ಬಳಕೆ ಜಗತ್ತಿನಾದ್ಯಂತ ಹೆಚ್ಚಾದ ಸಂದರ್ಭದಲ್ಲಿ ಭಾರತವೂ ಕೂಡ ನಂದಿ ಕೃಷಿಕರ ಮಹತ್ವ ಮರೆತು ತೈಲ ಶಕ್ತಿಗೆ ಶರಣಾಯಿತು. ಕೇವಲ ಎರಡು ದಶಕಗಳ ಹಿಂದೆ ಸ್ವಾವಲಂಬಿಗಳಾಗಿದ್ದ ಗ್ರಾಮಗಳು ಇಂದು ಸಂಪೂರ್ಣವಾಗಿ ಪರಾವಲಂಬಿಗಳಾಗಿವೆ. ಕೇವಲ ಒಂದು ವರ್ಷ ಗ್ರಾಮಗಳಿಗೆ ತೈಲ ಪೂರೈಕೆ ನಿಂತರೆ ಗ್ರಾಮದ ಕೃಷಿ ಚಟುವಟಿಕೆ ಸಂಪೂರ್ಣವಾಗಿ ನಿಲ್ಲಬಹುದಾದ ವಾತಾವರಣ ನಿರ್ಮಾಣವಾಗಿದೆ. 80 ಪ್ರತಿಶತ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಭಾರತ ದೇಶವು ಹಲವು ರೀತಿಯಲ್ಲಿ ಇಂದು ಪರಾವಲಂಬಿ ರಾಷ್ಟ್ರವಾಗಿದೆ.
ಕಳೆದ ಕೆಲವು ದಶಕಗಳಲ್ಲಿ ಸಂಪೂರ್ಣವಾಗಿ ತೈಲ ಶಕ್ತಿಯನ್ನು ಅವಲಂಬಿಸಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು, ತೈಲ ಶಕ್ತಿಯನ್ನು ಹೊಂದಿದ ರಾಷ್ಟ್ರಗಳ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿವೆ. ತೈಲ ಶಕ್ತಿಯನ್ನು ಹೊಂದಿದ ರಾಷ್ಟ್ರಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಯುದ್ಧ ಜರುಗಿದಾಗ ಭಾರತಕ್ಕೆ ತೈಲ ಶಕ್ತಿಯ ಕೊರತೆ ಆಗುವುದು ನಿಶ್ಚಿತ. ಏಕೆಂದರೆ, ಇಂದು ಯುದ್ಧ ಮಾಡುವ ದೇಶಗಳ ಮೊದಲ ಗುರಿ ಶಸ್ತ್ರಾಸ್ತ್ರಗಳ ಸಂಗ್ರಹಣಾ ಸ್ಥಳಗಳು ಹಾಗೂ ಕಚ್ಚಾ ತೈಲ ನಿಕ್ಷೇಪ ಗಳಾಗಿರುತ್ತವೆ. ಮುಂದಿನ ಐದು ವರ್ಷಗಳಲ್ಲಿ ತೈಲ ಶಕ್ತಿಯನ್ನು ಹೊಂದಿದ ರಾಷ್ಟ್ರಗಳು ಹಾಗೂ ತೈಲ ಶಕ್ತಿ ಅವಲಂಬಿತ ರಾಷ್ಟ್ರಗಳ ಮಧ್ಯೆ ಸಂಘರ್ಷ ಉಂಟಾಗುವ ಅನಿವಾರ್ಯತೆ ಬಂದೊದಗುವುದು ನಿಶ್ಚಿತ. ಇಂತಹ ಸಂದರ್ಭದಲ್ಲಿ ತೈಲ ಶಕ್ತಿಯನ್ನು ಅತೀ ಹೆಚ್ಚು ಅವಲಂಬಿಸಿದ ರಾಜ್ಯ ಹಾಗೂ ರಾಷ್ಟ್ರವನ್ನು ಮುನ್ನೆಡೆಸುವ ರಾಜಕೀಯ ನಾಯಕರು ಅತೀ ದೊಡ್ಡ ಸಂಕಷ್ಟಕ್ಕೆ ಸಿಲುಕುವರು.
ಜಗತ್ತಿನ ಎಲ್ಲ ತೈಲ ನಿಕ್ಷೇಪಗಳಲ್ಲಿರುವ ತೈಲ ಶಕ್ತಿಯು ಕೇವಲ 20 ದಿನಗಳ ಸೂರ್ಯನ ಶಕ್ತಿಗೆ ಸಮಾನವಾಗಿದೆ. ಹಾಗಾಗಿ, ದಿನ ಕಳೆದಂತೆ ತೈಲ ಶಕ್ತಿಯ ಲಭ್ಯತೆ ಕಡಿಮೆಯಾಗುತ್ತಲೇ ಸಾಗುವುದು. ಜಗತ್ತನ್ನು ವಿಷಪೂರಿತ ಮಾಡುವ ತಾತ್ಕಾಲಿಕವಾದ ತೈಲ ಶಕ್ತಿಯನ್ನು ಅವಲಂಬಿಸಿ ಜಗತ್ತಿನ ಬಹುತೇಕ ರಾಷ್ಟ್ರಗಳು ಅಭಿವೃದ್ಧಿ ಕಾಣಲು ಪ್ರಯತ್ನಿಸುತ್ತಿವೆ. ನಂದಿ ತತ್ವವು ಭೂಮಿಯ ಜೀವಂತಿಕೆಯನ್ನು ಹೆಚ್ಚಿಸುತ್ತಾ ಸಾಗಿದರೆ, ತೈಲ ತತ್ವ ಭೂಮಿಯ ಜೀವಂತಿಕೆ ನಾಶ ಮಾಡುತ್ತಾ ಸಾಗುವುದು. ಇದೇ ಕಾರಣಕ್ಕೆ ಇಂದು ಜಗತ್ತಿನ ಅರ್ಧಕ್ಕಿಂತ ಹೆಚ್ಚು ಭೂಮಿ ಮರಳುಗಾಡಾಗಿ ಪರಿವರ್ತನೆ ಆಗುತ್ತಿದೆ ಹಾಗೂ ಭೂಮಿಯ ಮೇಲಿನ 70 ಪ್ರತಿಶತ ಜೀವರಾಶಿಗಳು ಕಣ್ಮರೆಯಾಗಿವೆ. ಸೂರ್ಯನ ಶಕ್ತಿಯನ್ನು ವಿವಿಧ ರೂಪಗಳಲ್ಲಿ ಪರಿವರ್ತನೆ ಮಾಡಿ ಭೂಮಿಯ ಜೀವಂತಿಕೆಯನ್ನು ಹೆಚ್ಚಿಸುವ ಸಾಮರ್ಥ್ಯ ನಂದಿ ಸಂಪತ್ತಿಗಿದೆ. ಪಂಚಮಹಾಭೂತಗಳನ್ನು ಶುದ್ಧವಾಗಿ ಇರಿಸಿ ನಾಗರೀಕತೆಯ ಬೆಳವಣಿಗೆ ಕುಂಠಿತವಾಗದಂತೆ ನೋಡಿಕೊಳ್ಳುವ ಶಕ್ತಿಯೇ ನಂದಿಯಾಗಿದೆ.
ನಂದಿ ಕೃಷಿ ಆಧಾರಿತ ಸ್ವಾವಲಂಬಿ ಗ್ರಾಮಗಳು ಅತೀ ಹೆಚ್ಚು ಭಾರತದಲ್ಲಿರುವ ಕಾರಣ ಜಗತ್ತಿನಲ್ಲಿ ಅತೀ ಹೆಚ್ಚು ಸನ್ಯಾಸಿಗಳ ಬೆಳವಣಿಗೆಗೆ ಆಶ್ರಯ ನೀಡುತ್ತಾ ಬಂದಿರುವ ರಾಷ್ಟ್ರ ನಮ್ಮದಾಗಿದೆ. ಆದರೆ, ಇಂದು ತೈಲ ಶಕ್ತಿಯ ದುಷ್ಪರಿಣಾಮದಿಂದ ರೈತರು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಮಠ ಮಾನ್ಯಗಳಿಗೆ ಆಶ್ರಯ ನೀಡುವ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾದರೆ, ರೈತರು ಹಾಗೂ ರಾಜಕೀಯ ನಾಯಕರ ಜೊತೆಗೆ ಮಠ ಮಾನ್ಯಗಳಿಗೆ ದೊಡ್ಡ ಪೆಟ್ಟು ಬೀಳುವುದು. ಕೃಷಿಯಲ್ಲಿ ತೈಲ ಶಕ್ತಿಯ ಬಳಕೆ ಹೀಗೆಯೇ ಮುಂದುವರೆದರೆ ಪಂಚಮಹಾಭೂತಗಳು ಕಲುಷಿತವಾಗಿ ಸಮಾಜ ಅನಾರೋಗ್ಯಕ್ಕೆ ತುತ್ತಾಗಿ ಹಲವು ಸಮಸ್ಯೆಗಳು ಹೆಚ್ಚಾಗುತ್ತಾ ಸಾಗುವವು. ಯುದ್ಧ ಅಥವಾ ಪ್ರಕೃತಿ ವಿಕೋಪಗಳಿಂದ ತೈಲ ಕೊರತೆಯಾದರೆ ಸಮಾಜ ದೊಡ್ಡ ಆಘಾತಕ್ಕೆ ಒಳಗಾಗುವುದು. ಯಾವುದೇ ರೀತಿಯಿಂದ ನೋಡಿದರೂ ಸಹ, ಭವಿಷ್ಯದಲ್ಲಿ ಸಮಸ್ಯೆ ಎದುರಿಸಲು ನಾವೆಲ್ಲರು ಸಿದ್ಧತೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಬಂದೊದಗಿದೆ.
"ಜಗತ್ತಿಗೆ ದೊಡ್ಡದಾದ ಸಮಸ್ಯೆ ತಲೆ ದೋರಿದಾಗ ಭಾರತ ದೇಶ ಪರಿಹಾರ ನೀಡಿದೆ" ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆಯಾ ಸಂದರ್ಭದ ಜಟಿಲವಾದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರದ ಜನರನ್ನು ಒಗ್ಗೂಡಿಸಿದವರು ಆಧ್ಯಾತ್ಮಿಕ ನಾಯಕರಾಗಿದ್ದಾರೆ. ಇಂದು ಜಗತ್ತು ಎದುರಿಸಬಹುದಾದ ಬಹು ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರಾಷ್ಟ್ರದ ಜನರನ್ನು ಒಂದು ನಿರ್ದಿಷ್ಟ ಗುರಿಯೆಡೆಗೆ ಚಲಿಸುವಂತೆ ಮಾಡುವ ದೊಡ್ಡ ಜವಾಬ್ದಾರಿ ಆಧ್ಯಾತ್ಮಿಕ ನಾಯಕರಿಗೆ ಬಂದೊದಗಿದೆ.
ಭಾರತ ದೇಶವು ಅತೀ ಹೆಚ್ಚು ವಿದೇಶಿಗರಿಗೆ ಹಾಗೂ ವಿದೇಶಿ ಧರ್ಮಗಳ ಜನರಿಗೆ ಆಶ್ರಯ ನೀಡುತ್ತಾ ಬಂದಿರುವುದಕ್ಕೆ ಮೂಲ ಕಾರಣ ವೈವಿಧ್ಯತೆಯಿಂದ ಕೂಡಿದ ಕೃಷಿಗೆ ಪೂರಕ ವಾತಾವರಣ ಹಾಗೂ ನಂದಿ ಸಂಪತ್ತಾಗಿದೆ. ಹಾಗಾಗಿ, ಭಾರತ ದೇಶದಲ್ಲಿರುವ ಕೃಷಿಗೆ ಪೂರಕ ವಾತಾವರಣ ಹಾಗೂ ಕೃಷಿಗೆ ಅವಶ್ಯವಿರುವ ನಂದಿ ಸಂಪತ್ತಿಗೆ ಧಕ್ಕೆ ಆಗದಂತೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಂದಿ ಕೃಷಿ, ನಂದಿ ಉದ್ದಿಮೆಗಳು, ನಂದಿ ಬಯೋಗ್ಯಾಸ್ ಹಾಗೂ ನಂದಿ ವಿದ್ಯುತ್ ಉತ್ಪಾದನೆ, ಹೀಗೆ ಹಲವು ನಂದಿ ಪೂರಕ ಯೋಜನೆಗಳಿಗೆ ಪ್ರೋತ್ಸಾಹ ನೀಡುವ ಕಾನೂನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿಯನ್ನು ಕ್ರೋಢೀಕರಿಸಬೇಕಾಗಿದೆ. ಹೊಸ ತಂತ್ರಜ್ಞಾನಗಳನ್ನು ನಂದಿ ಆಧಾರಿತ ಚಟುವಟಿಕೆಗಳಲ್ಲಿ ಬಳಸಿಕೊಂಡು ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸಲು ಪ್ರಯತ್ನಿಸಿದರೆ ಮುಂದಿನ ಹತ್ತು ವರ್ಷಗಳಲ್ಲಿ ಭಾರತವನ್ನು ಹಲವು ರೂಪಗಳಲ್ಲಿ ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಸಾಧ್ಯವಿದೆ. ಸ್ವಾವಲಂಬಿ ರಾಷ್ಟ್ರ ಮಾತ್ರ ಇತರ ರಾಷ್ಟ್ರಗಳಿಗೆ ಮಾರ್ಗದರ್ಶನ ಮಾಡಬಲ್ಲದು. ಹಾಗಾಗಿ, ಭಾರತ ದೇಶದ ನಂದಿ ಶಕ್ತಿಯನ್ನು ಆಧುನಿಕ ತಂತ್ರಜ್ಞಾನಗಳಿಂದ ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಭಾರತವು ಜಗತ್ತಿನಲ್ಲಿ ವಿಜಯಿ ರಾಷ್ಟ್ರವಾಗಿ ಗುರುತಿಸಿಕೊಂಡು ಇತರ ರಾಷ್ಟ್ರಗಳಿಗೆ ವಿಜಯದ ಮಾರ್ಗ ಪರಿಚಯಿಸಲು ಸಾಧ್ಯವಾಗುವುದು. ಸಮಸ್ಯೆಗಳು ನೂರೆಂಟು, ಪರಿಹಾರ ಒಂದೇ ನಂದಿ. ಖಂಡಿತ, ನಂದಿಗೆ ಜಯವಾದರೆ ಜಗತ್ತಿಗೆ ಜಯವಾಗುವುದು.
ಜೈ ನಂದಿ, ಜೈ ಜಗತ್
Subscribe to:
Post Comments (Atom)
ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?
ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...
-
ಧಾರವಾಡದ ಡಾ. ದಾಕ್ಷಾಯಣಿ ಚಿದಾನಂದ ರಾಮನಗೌಡರ ಎಂಬ ವೈದ್ಯ ದಂಪತಿಗಳು ಅತ್ಯಂತ ಭಕ್ತಿಯಿಂದ ನಿರ್ಮಿಸಿದ ಅಮೃತ ಗೋಧಾಮದಲ್ಲಿ ನಂದಿ ಶಕ್ತಿಯಿಂದ ಸ್ವಾವಲಂಬಿ ಭಾರತ ನಿರ್ಮಾಣ...
-
ವಿಡಿಯೋ ವೀಕ್ಷಿಸಿದ ನಂತರ ಲೇಖನ ಓದಿ... ಸೈದ್ಧಾಂತಿಕವಾಗಿ ಒಬ್ಬ ಗುರು ತತ್ವಗಳನ್ನು ಪ್ರತಿಪಾದಿಸಿ ತತ್ವಜ್ಞಾನಿ ಆಗಬಹುದು, ಗುರುವೇ ತತ್ವವಾಗಿ ಉಳಿಯಲು ಖಂಡಿತ ಸಾಧ್ಯವಿಲ...
-
ಅತ್ಯಂತ ಕ್ರಿಯಾಶೀಲ ಯುವ ಸನ್ಯಾಸಿಗಳಾದ ಬಸವನ ಬಾಗೇವಾಡಿಯ ವಿರಕ್ತ ಮಠದ ಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಯವರು ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ...

No comments:
Post a Comment