Tuesday, October 21, 2025

ಆರದಿರಲಿ ವೀರಶೈವ ಲಿಂಗಾಯತರ 'ನಂದಿ ಶಕ್ತಿ' ಎಂಬ ಆತ್ಮಜ್ಯೋತಿ

 


ದೀಪಜ್ಯೋತಿ ಹೇಗೆ ಮುಂದೆ‌ ಸಾಗಲು ಬೆಳಕು ನೀಡುವುದೋ, ಅದೇ ರೀತಿ ನಂದಿ ಶಕ್ತಿಯೆಂಬ ಆತ್ಮಜ್ಯೋತಿಯು ಹಿಂದು ಧರ್ಮದ ಹೃದಯವಾದ ವೀರಶೈವ ಲಿಂಗಾಯತ ಸಮಾಜ ನಿರ್ಮಾಣವಾಗಲು ಅನಾದಿ ಕಾಲದಿಂದ ಬೆಳಕು‌ ನೀಡುತ್ತಾ ಬಂದಿದೆ. ವೀರಶೈವ ಲಿಂಗಾಯತ ಸಮಾಜದ ಬೆಳವಣಿಗೆಗೆ ಕಾರಣವಾದ ನಂದಿ ಶಕ್ತಿಯನ್ನು ಮರೆತು ನಡೆದಂತೆ ಹಲವು ಸಮಸ್ಯೆಗಳು ಉದ್ಭವವಾಗುತ್ತಿವೆ. ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಭಾಗದ ಗೌಡಕಿ ಮನೆತನಗಳು ನಾಶವಾದವು. ಆತ್ಮಹತ್ಯೆಗೆ ಶರಣಾದ ರೈತರು, ಸಾಲದ ಸುಳಿಯಲ್ಲಿ ಸಿಲುಕಿಕೊಂಡ ರೈತರು ಹಾಗೂ ಕನ್ಯೆ ದೊರೆಯದೆ ಅವಿವಾಹಿತರಾಗಿರುವ ರೈತರು ಅತೀ ಹೆಚ್ಚು ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದವರಾಗಿದ್ದಾರೆ. ಕೊನೆಗೆ ವೀರಶೈವ ಲಿಂಗಾಯತ ಮಠಾಧೀಶರು ಹಾಗೂ ರಾಜಕೀಯ ನಾಯಕರ ಅಸ್ತಿತ್ವಕ್ಕೆ ಕೊಡಲೆ ಪೆಟ್ಟು ಬೀಳಲು ಪ್ರಾರಂಭಿಸಿದೆ. ವೀರಶೈವ ಲಿಂಗಾಯತರ ಆತ್ಮಜ್ಯೋತಿಯಾದ ನಂದಿ ಶಕ್ತಿಯ ಸಹಾಯವಿಲ್ಲದೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂಬುದು ಇಂದಿನ ವೈಜ್ಞಾನಿಕ ಅಂಕಿ ಅಂಶಗಳು ತಿಳಿಸುತ್ತಿವೆ. ಕಳೆದ ಎರಡು ದಶಕಗಳಲ್ಲಿ ನಂದಿ ಶಕ್ತಿಗೆ ವಿರುದ್ಧವಾದ ತೈಲ ಶಕ್ತಿಗೆ ಪೂರಕ ವ್ಯವಸ್ಥೆ‌ ನಿರ್ಮಾಣವಾಗಿ ನಂದಿ ಸಂಪತ್ತು ಕಾಸಾಯಿಖಾನೆಯ ಪಾಲಾದ ಕಾರಣ ಇಂದು ಸಮಾಜ ದೊಡ್ಡ ಬೆಲೆ ತೆರಬೇಕಾದ ಸಂದರ್ಭ ಬಂದೊದಗಿದೆ. ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎನ್ನುವಂತೆ ಸಮಾಜದ ಎಲ್ಲ ಜನರು ಒಗ್ಗೂಡಿ ಸಮಸ್ಯೆಯನ್ನು ಎದುರಿಸಬೇಕಾಗಿದೆ. 

ಜಗತ್ತಿನಲ್ಲಿ ಅತೀ ಹೆಚ್ಚು ಕೃಷಿ ಭೂಮಿ ಹೊಂದಿದ ಭಾರತ ದೇಶದಲ್ಲಿ ಗಿಡಮರಗಳ ಆಧಾರಿತ ಕೃಷಿಯಲ್ಲಿ ತೊಡಗುತ್ತಾ ಬಂದ ವೈಷ್ಣವರಿಗೆ ಗೋ ಸಂಪತ್ತು ಸಮಾಜದ ಬೆಳವಣಿಗೆಗೆ ಬುನಾದಿಯಾಗಿದೆ. ಅದಕ್ಕಾಗಿ ವಿಷ್ಣು ತತ್ವದ ಪ್ರತೀಕವಾಗಿರುವ ಕೃಷ್ಣ, ರಾಘವೇಂದ್ರ ರಾಯರು, ದತ್ತಾತ್ರೇಯ, ಹೀಗೆ ಅನೇಕರ ಭಾವಚಿತ್ರದೊಂದಿಗೆ ಗೋವಿನ ಚಿತ್ರವನ್ನು ಕಾಣುತ್ತೇವೆ. ಬಯಲು ಸೀಮೆಯ ಕೃಷಿಯಲ್ಲಿ ತೊಡಗಿದ ವೀರಶೈವ ಲಿಂಗಾಯತರಿಗೆ ನಂದಿ ಕೃಷಿ ಸಮಾಜದ ಬುನಾದಿಯಾಗಿದೆ. ಅದಕ್ಕಾಗಿ, ಸಮಸ್ತ ವೀರಶೈವ ಲಿಂಗಾಯತರ ಮನೆಗಳ ಜಗುಲಿಯ ಮೇಲೆ ಹಾಗೂ ಶಿವಾಲಯಗಳ ಶಿವಲಿಂಗದ ಮುಂದೆ ನಂದಿ ಮೂರ್ತಿಯನ್ನು ಇಟ್ಟು ಪೂಜಿಸಲಾಗುತ್ತದೆ. ಪೂಜ್ಯರ ಸಮಾಧಿಯ ಮೇಲೆ ಅಥವಾ ಗುರುವೆಂಬ ಲಿಂಗದ ಮುಂದೆ ನಂದಿ ಮೂರ್ತಿ ಇರುತ್ತದೆ. ವೀರಶೈವ ಲಿಂಗಾಯತರ 80 ಪ್ರತಿಶತ ಆಚರಣೆಗಳು ನಂದಿ ಕೇಂದ್ರಿತವಾಗಿವೆ. ಯಾವ ಗ್ರಾಮಗಳಲ್ಲಿ ಅತೀ ಹೆಚ್ಚು ಜೋಡೆತ್ತಿನ ಕೃಷಿ ಉಳಿದು ಬೆಳೆಯುತ್ತಿದೆಯೋ ಅಲ್ಲಿ ಮಾತ್ರ ವೀರಶೈವ ಲಿಂಗಾಯತ ತತ್ವಗಳು ಉಳಿದು ಬೆಳೆಯಲು ಸಾಧ್ಯವಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಸಿದ್ಧ ಮಾಡಿ ತೋರಿಸಬಹುದಾಗಿದೆ. ಈ ಸತ್ಯದ ಅರಿವು ಮೂಡಿಸುವುದಕ್ಕಾಗಿ ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಶಿರ್ವಾದದಿಂದ 'ನಂದಿ ಕೂಗು' ಅಭಿಯಾನ ಪ್ರಾರಂಭವಾಗಿದೆ. 

ವೀರಶೈವ-ಲಿಂಗಾಯತವೆಂಬ ಎರಡು ಶಬ್ದಗಳು ಬೇರೆಯಾಗಿ ತೋರಿದರೂ ಸಹ, ಎರಡನ್ನೂ ಚಲಿಸುವ ಶಕ್ತಿ ನಂದಿಯಾಗಿದೆ ಹಾಗೂ ಎರಡರ ಗುರಿಯು ಮಾನವ ಪ್ರಜ್ಞೆಯ ವಿಕಾಸವಾಗಿದೆ. 12ನೇ ಶತಮಾನದಲ್ಲಿ ಜೋಡೆತ್ತಿನ ಕೃಷಿ ಹಾಗೂ ಇದನ್ನು ಅವಲಂಬಿತ ಜಂಗಮ, ಬಡಿಗೇರ, ಕಂಬಾರ, ಕುಂಬಾರ, ಚಮ್ಮಾರ ಹೀಗೆ ವಿವಿಧ ಕಾಯಕಗಳಿಗೆ ಭದ್ರತೆ ದೊರೆತು ಸಮಾಜವು ಉತ್ತುಂಗ ಸ್ಥಿತಿಯನ್ನು ತಲುಪಿತ್ತು. ಬೃಹತ್ ದೇವಸ್ಥಾನಗಳು 12ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವುದು ಸಮಾಜ ಉತ್ತುಂಗ ಮಟ್ಟದಲ್ಲಿ ಬೆಳೆದಿರುವುದಕ್ಕೆ ಸಾಕ್ಷಿಯಾಗಿವೆ. ನಂದಿ ಶಕ್ತಿಯಿಂದ ಸಮಾಜ ಬಾಹ್ಯ ಅಭಿವೃದ್ಧಿ ಕಂಡಾಗ ದೈವೀ ಶಕ್ತಿ ಅಥವಾ ಪ್ತಕೃತಿಯ ಜೀವ ಶಕ್ತಿ ಉತ್ತುಂಗ‌ ಮಟ್ಟದಲ್ಲಿರುತ್ತದೆ. ಆ ಸಂದರ್ಭದಲ್ಲಿ ವಿಶ್ವಗುರು ಬಸವಣ್ಣನವರು ಇಷ್ಟಲಿಂಗ ಪೂಜಾ ಸಾಧನದ ಮೂಲಕ ಮೊದಲು ತಾವು ಆತ್ಮ ಸಾಕ್ಷಾತ್ಕಾರಕ್ಕೆ ಒಳಗಾಗಿ, ನಂತರ ಬಹು ಜನರಿಗೆ ಲಿಂಗ ದೀಕ್ಷೆ ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸಿದರು. ಯಾರು ಇಷ್ಟಪಟ್ಟು ಲಿಂಗ ಪೂಜಾ ಸಾಧನದಲ್ಲಿ ತೊಡಗಿದರೋ ಅವರು ಮೊದಲು ತಮ್ಮ ಕಾಯಕದ‌ ಮಹತ್ವ ಅರಿಯುತ್ತಾ ತಮ್ಮ ಪ್ರಜ್ಞಾ ಸ್ತರವನ್ನು ಹೆಚ್ಚಿಸಿಕೊಂಡರು. ಅಂತಹ ಶ್ರೇಷ್ಠ ಶರಣರಿಂದ ಬಹು ಜನರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಕೃತಿಯ‌ ನಿಯಮಗಳು ವಚನಗಳ ರೂಪದಲ್ಲಿ ವ್ಯಕ್ತವಾದವು.

12ನೇ ಶತಮಾನದ ಸಮಾಜದ ಅಭಿವೃದ್ಧಿಗೆ ನಂದಿ ಶಕ್ತಿ ಕಾರಣವಾಗಿತ್ತು, ಆದರೆ ನಾವಿಂದು‌ ನಂದಿ ಶಕ್ತಿಗೆ ವಿರಿದ್ಧವಾದ ತೈಲ ಶಕ್ತಿಯನ್ನು ಅವಲಂಬಿಸಿ ಅಭಿವೃದ್ಧಿ ಹೊಂದಿದ್ದೇವೆ. ಹಾಗಾಗಿ, 12ನೇ ಶತಮಾನದ ವಚನಗಳು ನಂದಿ ಕೃಷಿಕರೆಂಬ ಗಟ್ಟಿ ಬೇರುಗಳಿಂದ ಬೆಳೆದ ಮರದ ಫಲಗಳಾಗಿವೆ. ಇಂದು ನಾಶವಾಗುತ್ತಿರುವ ನಂದಿ ಕೃಷಿ ಎಂಬ ಬೇರುಗಳನ್ನು ಉಳಿಸಿ ಬೆಳೆಸುವುದು ಮಾತ್ರ ವೀರಶೈವ ಲಿಂಗಾಯತ ಸಮಾಜ ಉಳಿಸಿಕೊಳ್ಳಲು ಇರುವ ಮಾರ್ಗವಾಗಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ‌ ವೀರಶೈವ ಲಿಂಗಾಯತರನ್ನು ನಂದಿ‌ ಶಕ್ತಿ ಆಧಾರಿತವಾಗಿ ಒಂದು ಗೂಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದೆ. ನಂದಿ ಗ್ರಾಮ ಸ್ವರಾಜ್ಯ ಎಂಬ ಪರಿಕಲ್ಪನೆ ಅಡಿಯಲ್ಲಿ ಹೊಸ ತಂತ್ರಜ್ಞಾನ ಆಧಾರಿತ ನಂದಿ ಕೃಷಿ, ನಂದಿ ವಿದ್ಯುತ್, ನಂದಿ ಬಯೋಗ್ಯಾಸ್, ನಂದಿ ಆರೋಗ್ಯವರ್ಧಕ ಉತ್ಪನ್ನಗಳ ಉದ್ದಿಮೆಗಳಿಗೆ ಪ್ರೋತ್ಸಾಹ ನೀಡುವ ವ್ಯವಸ್ಥೆ‌ ನಿರ್ಮಿಸಿ ಗ್ರಾಮಗಳನ್ನು ಸ್ವಾವಲಂಬಿ ಗಳನ್ನಾಗಿಸಬಹುದಾಗಿದೆ. 

ನಂದಿ ಗ್ರಾಮ ಸ್ವರಾಜ್ಯಕ್ಕೆ ಪೂರಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುವ ನಾಯಕರಿಗೆ ಪಕ್ಷಾತೀತವಾಗಿ ಮತ ಮೀಸಲಿಡಲು ವೀರಶೈವ ಲಿಂಗಾಯತ ಪೂಜ್ಯರು ತಮ್ಮ ಶಿಷ್ಯರಿಗೆ ಅರಿವು ಮೂಡಿಸಲು ಮೊದಲು ಒಗ್ಗೂಡಬೇಕಾಗಿದೆ. ಇದಕ್ಕೆ ಪರ್ಯಾಯ ಮಾರ್ಗ ಇನ್ನೊಂದಿಲ್ಲ ಎಂಬುದು ಇಂದಿನ ವೈಜ್ಞಾನಿಕ ಸಂಗತಿಗಳು ತಿಳಿಸುತ್ತಿವೆ. ವೀರಶೈವ ಲಿಂಗಾಯತರು ಜಾಗೃತರಾಗದಿದ್ದರೆ, ಮುಂಬರುವ ದಿನಗಳಲ್ಲಿ ಸಕ್ಕರೆ ಕಾರ್ಖಾನೆಗಳು, ದಾಲ್ ಮಿಲ್ಸ್, ರೈಸ್‌ ಮಿಲ್ಸ್ ಹಾಗೂ ಇತರ ಅನೇಕ ಉದ್ದಿಮೆಗಳನ್ನು ಉಳಿಸಿಕೊಳ್ಳಲು ಖಂಡಿತ ಸಾಧ್ಯವಿಲ್ಲ. ಏಕೆಂದರೆ, ರಾಜ್ಯದ 60 ಪ್ರತಿಶತ ಭೂಮಿ ತನ್ನ ಜೀವಸತ್ವವನ್ನು‌ ಈಗಾಗಲೇ ಕಳೆದುಕೊಂಡಿದೆ. ನಂದಿ ಆಧಾರಿತ ರೈತ ರಾಜಕೀಯದ ಕುರಿತು ಹೆಚ್ಚಿನ ಮಾಹಿತಿಯನ್ನು missionsavesoil.com ವೆಬ್ಸೈಟ್ ಮೂಲಕ ಪಡೆಯಬಹುದು. ವೀರಶೈವ ಲಿಂಗಾಯತರ ಆತ್ಮಜ್ಯೋತಿಯಾದ ನಂದಿ ಶಕ್ತಿಯ ಬೆಳಕು ಸರ್ವ ಧರ್ಮಗಳ ಜನರಿಗೆ ಒಳಿತನ್ನು ಉಂಟು ಮಾಡುವುದು ಎಂಬ ಅರಿವಿನೊಂದಿಗೆ ಒಗ್ಗೂಡಿ ಮುಂದೆ ಹೆಜ್ಜೆ ಇಡುವ ಸಂದರ್ಭ ಇದಾಗಿದೆ.

 ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 

.............................................

ಬಸವರಾಜ ಬಿರಾದಾರ

ನಾಯಕತ್ವ ಸಲಹೆಗಾರ ಹಾಗೂ ನಂದಿ‌ ಕೃಷಿ ತಜ್ಞ, 9449303880, missionsavesoil.com

No comments:

Post a Comment

ಪೂಜ್ಯರ ನಡುವಿನ ಭಿನ್ನಾಭಿಪ್ರಾಯಕ್ಕೆ ಬಸವಕಲ್ಯಾಣದ ಪರುಷ ಕಟ್ಟೆಯಲ್ಲಿದೆಯೇ ಪರಿಹಾರ?

  ಪೂಜ್ಯರು ನಂದಿಯಿಂದ ಒಂದಾದರೆ ಭಾರತದ ಸಂವಿಧಾನ ಉಳಿಯಲು ಸಾಧ್ಯವೆಂದು ಬಸವ ಕಲ್ಯಾಣದ ಪರುಷ ಕಟ್ಟೆಯ ಇತಿಹಾಸ ತಿಳಿಸುತ್ತಿದೆಯೇ? ಬಸವನ ಬಾಗೇವಾಡಿಯ ಮೂಲ ನಂದೀಶ್ವರನ ಕೃಪೆಯ...